ಬೆಂಗಳೂರು: ಪರಿವರ್ತನಾ ಯಾತ್ರೆಯ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೆಲಿಕಾಪ್ಟರ್ ಮೂಲಕ ರಾಜ್ಯ ಪ್ರವಾಸವನ್ನು ಮಾಡಲಿದ್ದು, ಈ ಕುರಿತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಗುರಿಯನ್ನು ಹಾಕಿಕೊಂಡಿದ್ದು, ರಾಜ್ಯದಲ್ಲಿ ಬಿಜೆಪಿ ಗೆಲುವು ಪಡೆಯಲು ಸಾಧ್ಯವಿರುವ ವಿಧಾನಸಭಾ ಕ್ಷೇತ್ರಗಳ ಮೇಲೆ ಹೆಚ್ಚಿನ ಗುರಿ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಪರಿವರ್ತನಾ ಯಾತ್ರೆ ಮುಗಿದ ಬಳಿಕ ಯಡಿಯೂರಪ್ಪ ಅವರು ಒಂದು ವಾರದ ಕಾಲ ವಿಶ್ರಾಂತಿ ಪಡೆಯಲಿದ್ದು, ನಂತರ ಹೆಲಿಕಾಪ್ಟರ್ ಮೂಲಕ ರಾಜ್ಯ ಪ್ರವಾಸ ಮಾಡಲಿದ್ದಾರೆ ಎನ್ನಲಾಗಿದೆ.


ಪ್ರವಾಸದ ವೇಳೆ ಕೇಂದ್ರದ ಹಲವು ಬಿಜೆಪಿ ನಾಯಕರು ಹಾಗೂ ತಾರಾ ಪ್ರಚಾರಕರು ಯಡಿಯೂರಪ್ಪನವರಿಗೆ ಸಾಥ್ ನೀಡಲಿದ್ದಾರೆ. ಪಕ್ಷವೇ ಯಡಿಯೂರಪ್ಪನವರಿಗೆ ಹೆಲಿಕಾಪ್ಟರ್ ನೀಡಲಿದೆ.
ಕಳೆದ ಎರಡು ದಿನಗಳಿಂದ ನಗರದ ನಡೆಯುತ್ತಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಗೆಲುವಿಗೆ ಬೇಕಿದ ಎಲ್ಲಾ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆ ಜನವರಿ 25 ರಂದು ಬೆಂಗಳೂರಿನಲ್ಲಿ ಅಂತ್ಯಗೊಳ್ಳಲಿದೆ. ಇದರೊಂದಿಗೆ 75 ದಿನಗಳ ಯಾತ್ರೆ ರಾಜ್ಯಾದ್ಯಂತ ಸುಮಾರು 6 ಸಾವಿರ ಕಿ.ಮೀ ದೂರವನ್ನು ಕ್ರಮಿಸಿ ಪೂರ್ಣಗೊಳಿಸಲಿದೆ.