– ಕುಮಟಳ್ಳಿಗೆ ಸಚಿವ ಸ್ಥಾನ ಕೊಡೋದು ಕಷ್ಟ
ಬೆಂಗಳೂರು: ನೂತನ ಸಚಿವ ಪಟ್ಟಿ ಬಿಡುಗಡೆಯಾಗಿದ್ದು ಗುರುವಾರ 10 ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಬಿಜೆಪಿ ಮುಖಂಡ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ದೆಹಲಿಯಿಂದ ನಮ್ಮ ರಾಷ್ಟ್ರೀಯ ನಾಯಕರು ಫೋನ್ ಮಾಡಿ 10 ಜನರನ್ನು ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಿ, ಉಳಿದವರಿಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡಿ ಎಂದಿದ್ದಾರೆ. ಅದರಂತೆ 10 ಜನರು ಮಾತ್ರ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು. ಇದನ್ನೂ ಓದಿ: ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್
Advertisement
Advertisement
ಮಾಜಿ ಸಚಿವ ಉಮೇಶ್ ಕತ್ತಿ ಅವರು ನಾಳೆಯೇ ಪ್ರಮಾಣವಚನ ಸ್ವೀಕಾರ ಮಾಡಬೇಕಿತ್ತು. ಆದರೆ ರಾಜೀನಾಮೆ ಕೊಟ್ಟು ಬಂದಿರುವ ಶಾಸಕರನ್ನಷ್ಟೇ ಸಚಿವರನ್ನಾಗಿ ಮಾಡಿ, ಉಳಿದಂತೆ ಯಾರನ್ನು ಸಂಪುಟಕ್ಕೆ ಸೇರಿಸವುದು ಬೇಡ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಉಮೇಶ್ ಕತ್ತಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿಲ್ಲ. ಅವರು ನೂರಕ್ಕೆ ನೂರರಷ್ಟು ಮಂತ್ರಿ ಆಗುತ್ತಾರೆ. ಈಗ ಆಗದೆ ಇದ್ದರೂ ಮುಂದೆ ಅವರನ್ನು ಮಂತ್ರಿ ಮಾಡುತ್ತೇವೆ. ಆದರೆ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೊಡುವುದು ಕಷ್ಟ ಆಗುತ್ತದೆ. ಈ ನಿಟ್ಟಿನಲ್ಲಿ ಅವರನ್ನು ಕರೆದು ಮಾತನಾಡುವ ಪ್ರಯತ್ನ ಮಾಡಿ, ಬೇರೆ ಅವರಿಗೆ ಬೇರೆ ಸ್ಥಾನಮಾನ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದರು.
Advertisement
ದೆಹಲಿಗೆ ಬನ್ನಿ ಎಂದು ರಾಷ್ಟ್ರೀಯ ನಾಯಕರು ಕರೆದಿದ್ದಾರೆ. ಶೀಘ್ರದಲ್ಲೇ ತೆರಳಿ ಉಳಿದ ನಾಯಕರನ್ನು ಸಚಿವರನ್ನಾಗಿ ಮಾಡುವ ಸಂಬಂಧ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನೂತನ ಸಚಿವರ ಪಟ್ಟಿ ರಿಲೀಸ್- ಲಿಸ್ಟ್‌ನಲ್ಲಿ ಎಸ್.ಟಿ.ಸೋಮಶೇಖರ್ ಟಾಪ್