ಎಚ್‍ಡಿಡಿ ಗೆ ಪ್ರಶ್ನೆಗಳ ಸವಾಲು ಎಸೆದ ಬಿಎಸ್‍ವೈ

Public TV
2 Min Read
HDD BSY

ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಬಿಜೆಪಿ ಪರೋಕ್ಷ ಕಾರಣ ಎಂಬ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗರಂ ಆಗಿದ್ದು ತಮ್ಮ ಪ್ರಶ್ನೆಗೆ ಉತ್ತರಿಸುವಂತೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಸವಾಲು ಎಸೆದಿದ್ದಾರೆ.

ಕೇವಲ ರಾಜಕೀಯ ಲಾಭಕ್ಕಾಗಿ ಉತ್ತರ ಕರ್ನಾಟಕ ಜನತೆಯ ಭಾವನೆ ಜೊತೆ ಜೆಡಿಎಸ್ ಆಟವಾಡುತ್ತಿದ್ದು, ಈ ಬಗ್ಗೆ ಎಚ್.ಡಿ.ದೇವೇಗೌಡರವರು ಉತ್ತರಿಸಬೇಕಿದೆ. ಸಿಎಂ ಕುಮಾರಸ್ವಾಮಿಯವರ ಅಹಂಕಾರದ ನಡೆ ಹಾಗೂ ಜೆಡಿಎಸ್‍ನ ಸ್ವಾರ್ಥ ರಾಜಕಾರಣಕ್ಕೆ ರಾಜ್ಯದ ಜನತೆ ಪಾಠ ಕಲಿಸಬೇಕಿದೆ ಎಂದು ಜೆಡಿಎಸ್ ಪಕ್ಷದ ವಿರುದ್ಧ ಕಿಡಿಕಾರಿ ಬಿಎಸ್‍ವೈ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್‍ನಲ್ಲಿ ದೇವೇಗೌಡ ಅವರ ಮುಂದೇ ಮೂರು ಪ್ರಶ್ನೆಗಳನ್ನು ಇಟ್ಟಿರುವ ಬಿಎಸ್‍ವೈ, ಉತ್ತರ ಕರ್ನಾಟಕ ರಾಜ್ಯಕ್ಕೆ ಆದಾಯ ಬರುತ್ತಿಲ್ಲ. ಜಾತಿ, ಹಣ ಅಮಿಷಕ್ಕೆ ಒಳಗಾಗಿ ಅಲ್ಲಿನ ಜನರು ಮತ ಚಲಾಯಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಲಿಂಗಾಯತ ಮುಖ್ಯಮಂತ್ರಿ ಕೊಡುಗೆ ನೀಡಿಲ್ಲ ಎಂದು ಕೀಳು ಮಟ್ಟದ ಹೇಳಿಕೆ ನೀಡಿ ಕರ್ನಾಟಕ ಜನತೆಯನ್ನು ಯಾರು ಕೆರಳಿಸುತ್ತಿದ್ದಾರೆ ಉತ್ತರಿಸಿ ಎಂದು ಬಿಎಸ್‍ವೈ ಪ್ರಶ್ನಿಸಿದ್ದಾರೆ.

ಇದೇ ವೇಳೆ ರಾಜಕೀಯ ಲಾಭಕ್ಕಾಗಿ ಉತ್ತರ ಕರ್ನಾಟಕ ಕಡೆಗಣಿಸಿ, ರಾಜ್ಯವನ್ನು ಇಬ್ಭಾಗ ಮಾಡಲು ಯತ್ನಿಸಿದಿರಿ. ಈ ರೀತಿಯ ಅವಕಾಶವಾದಿ ರಾಜಕಾರಣವನ್ನು ನಾವು ಎಂದು ಮಾಡಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮಗಳ ಮುಂದೆಯೂ ದೇವೇಗೌಡರ ವಿರುದ್ಧ ಹರಿಹಾಯ್ದಿದ್ದ ಬಿಎಸ್‍ವೈ, ರಾಜಕೀಯ ಲಾಭಕ್ಕಾಗಿ ಉತ್ತರ ಕರ್ನಾಟಕ ಜನತೆ ಭಾವನೆ ಜೊತೆ ದೇವೇಗೌಡರು ಆಟವಾಡುತ್ತಿದ್ದಾರೆ. ಸಿಎಂ ಎಚ್‍ಡಿಕೆ ಅಹಂಕಾರದ ನಡೆ ಹಾಗೂ ಜೆಡಿಎಸ್ ಸ್ವಾರ್ಥ ರಾಜಕಾರಣಕ್ಕೆ ಜನ ಪಾಠ ಕಲಿಸಬೇಕಿದೆ ಎಂದು ಹೇಳಿದ್ದರು.

ಯಡಿಯೂರಪ್ಪ ಟ್ವೀಟ್‍ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಕಳೆದ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದ ಅಖಂಡತ್ವ ಎತ್ತಿಹಿಡಿಯಲು ಬೆಳಗಾವಿಯಲ್ಲಿ ಸುವರ್ಣ ಸೌಧ ಸ್ಥಾಪಿಸಿದ್ದೆವು. ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಯಾರು ಎಷ್ಟೇ ಕಾಲೆಳೆಯಲು ಪ್ರಯತ್ನಿಸಿದರೂ ಅಖಂಡ ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ನನ್ನ ಕಾರ್ಯ ನಿಲ್ಲುವುದಿಲ್ಲ ಎಂದು ಬರೆದು ತಿರುಗೇಟು ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *