ಬಿಜೆಪಿ ಸೋಲಿಗೆ ನಮ್ಮ ತಪ್ಪುಗಳು, ಲೋಪದೋಷಗಳೇ ಕಾರಣ: ಬಿಎಸ್‍ವೈ

Public TV
3 Min Read
BSY BJP SABE 3

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದರೂ ನಮ್ಮದೇ ತಪ್ಪುಗಳಿಂದ ಹಾಗೂ ಲೋಪದೋಷಗಳಿಂದ ನಾವು ಸೋಲಬೇಕಾಯಿತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರ್ ದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆಯೋಜಿಸಲಾಗಿದೆ. ಈ ಕಾರ್ಯಕಾರಿಣಿಯಲ್ಲಿ ಬಿಜೆಪಿ ನಾಯಕರು, ಶಾಸಕರು, ಸಂಸದರು ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಸೋತರು. ಆದರೆ ಬಾದಾಮಿಯಲ್ಲಿ ಕೇವಲ 1,600 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಾದಾಮಿಯಲ್ಲಿಯೂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಅಕಾಶಗಳಿದ್ದವು. ಈ ನಿಟ್ಟಿನಲ್ಲಿ ಶ್ರೀರಾಮುಲು ಅವರು ಒಂದು ದಿನ ಹೆಚ್ಚು ಪ್ರಚಾರ ಮಾಡಿದ್ದರೆ ಅಲ್ಲಿಯೂ ಬಿಜೆಪಿ ಜಯಗಳಿಸುತಿತ್ತು ಎಂದರು.

 

BSY BJP SABE 1 1

ಹಿಂದಿನ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಬಿಲ್ ಗಳನ್ನು ಪಾವತಿ ಮಾಡಬಾರದು ಎಂದು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮೌಖಿಕ ಆದೇಶ ನೀಡಿದ್ದಾರಂತೆ. ಅಲ್ಲದೇ ಹಿಂದಿನ ಸಚಿವರಿಗೆ ಕಮಿಷನ್ ಕೊಟ್ಟಿದ್ದರು ಕೂಡಾ ಈಗ ನಮ್ಮ ಪಾಲು ಕೊಡಿ ಎಂದು ಅವರು ಕೇಳಿರುವ ಬಗ್ಗೆ ರಾಜ್ಯದಾದ್ಯಂತ ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಕಳೆದ ಸರ್ಕಾರದ 17 ಸಚಿವರು ಸೋತಿದ್ದಾರೆ. ಆದರೆ ರಾಜ್ಯದ ಯಾವುದೇ ಮೂಲೆಗೆ ಹೋದರೂ ಬಿಜೆಪಿಗೆ ಹಿನ್ನಡೆ ಹೇಗಾಯಿತು ಎನ್ನುವುದೇ ಚರ್ಚೆಯಾಗುತ್ತಿದೆ. ಈಗಲೂ ಬಿಜೆಪಿ ಅಧಿಕಾರಕ್ಕೆ ಬರಲೆಂದು ಜನ ಬಯಸುತ್ತಾರೆ. ಜೆಡಿಎಸ್ 14 ಜಿಲ್ಲೆಯ ಒಂದೇ ಒಂದು ಮತಕ್ಷೇತ್ರದಿಂದ ಜಯಗಳಿಸಿಲ್ಲ. ಆದರೂ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಹಲವು ಮುಖಂಡರು ಬಿಜೆಪಿಗೆ ಬರಲು ಮುಂದಾಗಿದ್ದಾರೆ. ಅವರ ಮನೆಗಳಿಗೆ ಹೋಗಿ ಚರ್ಚಿಸಿ ಪಕ್ಷಕ್ಕೆ ಕರೆ ತರುವ ಕೆಲಸ ಮಾಡಬೇಕಾಗಿದೆ. ಬೇರೆ ಪಕ್ಷಗಳ ಮುಖಂಡರು ಬಂದರೆ ನಿಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಯೋಚಿಸುವುದನ್ನು ಬಿಡಿ. ಪಕ್ಷಕ್ಕೆ ಆಗಮಿಸುವ ಮುಖಂಡರಿಂದ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷ ಬಲವರ್ಧನೆ ಮಾಡಬೇಕು ಎಂದು ಕರೆ ನೀಡಿದರು.

BSY BJP SABE 2 1

 

ಇದು ಅಪವಿತ್ರ ಮೈತ್ರಿ ಸರ್ಕಾರವಾಗಿದ್ದು, ಹೆಚ್ಚು ದಿನ ಆಡಳಿತ ಮಾಡುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ ಅವರನ್ನು ಒಂಟಿಗಾಲಿನಲ್ಲಿ ನಿಲ್ಲಿಸುತ್ತಾರೆ. ಆದರೆ ಪಕ್ಷದಲ್ಲಿ ನೀವು ಯಾರು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿಲ್ಲ. ಅಲ್ಲದೇ ದಿವಾಳಿ ಸರ್ಕಾರದ ಕುರಿತು ಜನ ಜಾಗೃತಿ ಮೂಡಿಸಿಲ್ಲ. ಹೀಗಾಗಿ ನಾನೇ ಈ ಸಭೆಯನ್ನು ಆಯೋಜಿಸಬೇಕಾದ ಪರಿಸ್ಥಿತಿ ಬಂತು ಎಂದು ಹೇಳಿದರು.

 

ಸಮ್ಮಿಶ್ರ ಸರ್ಕಾರದಲ್ಲಿ ಬಜೆಟ್ ಮಂಡಿಸುವ ವಿಚಾರದಿಂದ ಕಚ್ಚಾಟ ಜೋರಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಜೆಟ್ ಗೆ ಪಾವಿತ್ರ್ಯತೆ ಇಲ್ಲ. ಸರ್ಕಾರ ರಚನೆಯಾಗಿ 22 ದಿನಗಳು ಕಳೆದಿದ್ದರೂ ಆಡಳಿತ ಸ್ಥಗಿತಗೊಂಡಿದೆ. ಹೀಗಾಗಿ ಕಳೆದ ನಾಲ್ಕು ತಿಂಗಳಿಂದ 10 ಸಾವಿರ ಕೋಟಿ ರೂ. ಅನುದಾನ ಬಳಕೆಯಾಗದೆ ಹಾಗೇ ಬಾಕಿ ಉಳಿದಿದೆ. ನಮ್ಮ ದೇಶದ ಸಂವಿಧಾನದ ಪ್ರಕಾರ ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಕರೆದು ಅವಕಾಶ ಕೊಟ್ಟಿದ್ದರು. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನವರು ದೇಶದ ಇತಿಹಾಸದಲ್ಲಿ ಮೊದಲ ಬಾರಿ ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದರು. ಇದರಿಂದಾಗಿ ನಮಗೆ ದೊರೆತ 24 ಗಂಟೆಯ ಒಳಗೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ ಎಂದರು.

ನಮ್ಮ ಮೊದಲ ಸಂಪುಟ ಸಭೆಯಲ್ಲಿಯೇ ರೈತರ ಸಾಲಮನ್ನಾ ಮಾಡಲು ಮುಖ್ಯ ಕಾರ್ಯದರ್ಶಿ ಜತೆ ಚರ್ಚೆ ನಡೆಸಲಾಗಿತ್ತು. ಅಲ್ಲದೇ ನೋಟ್ ಸಿದ್ಧ ಪಡಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಬಹುಮತ ಸಾಬೀತು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ರೈತರ ಸಾಲಮನ್ನಾ, ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಲು ಆಗಲಿಲ್ಲ ಎಂದು ಬಿಎಸ್‍ವೈ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಕ್ರಮಕ್ಕೆ ಮುಂದಾಗಿದ್ದವು. ಮುಖ್ಯಮಂತ್ರಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದರು. ಪ್ರಣಾಳಿಕೆಯ ಅಂಶಗಳನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ ಎಂದು ದೂರಿದರು.

ಕಾರ್ಯಕಾರಿಣಿಯಲ್ಲಿ ಬಿಜೆಪಿಯ ಮುರಳೀಧರ್ ರಾವ್, ಅನಂತಕುಮಾರ್, ರಮೇಶ್ ಜಿಗಜಿಣಗಿ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಿ.ಎಲ್.ಸಂತೋಷ್, ಸಿ.ಟಿ.ರವಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಶ್ರೀರಾಮುಲು ಸೇರಿದಂತೆ 800ಕ್ಕೂ ಕಾರ್ಯಕಾರಿಣಿ ಸದಸ್ಯರು ಭಾಗಿಯಾಗಿದ್ದರು. ಆದರೆ ಅನಾರೋಗ್ಯದಿಂದಾಗಿ ಡಿವಿ ಸದಾನಂದಗೌಡ ಹಾಗೂ ಕೆ.ಎಸ್.ಈಶ್ವರಪ್ಪ ಗೈರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *