ಬೆಂಗಳೂರು: ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಮ್ಮುಖದಲ್ಲಿ ನಗರದ ಪದ್ಮನಾಭನಗರ ನಿವಾಸದಲ್ಲಿ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರ್ಪಡೆಯಾದರು.
Advertisement
ಜೆಡಿಎಸ್‍ಗೆ ಸೇರ್ಪಡೆಯಾದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ನಾಯಕರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ. ಏನೇ ಕೇಳಿದರು ಅಮಿತ್ ಶಾ ಎಂಬುದಾಗಿ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
Advertisement
Advertisement
ನಮ್ಮ ಜಿಲ್ಲೆಯಲ್ಲೂ ಐದು ಬಾರಿ ಸಂಸದರಾಗಿ ಆಯ್ಕೆಯಾದ ನಾಯಕರು ಇದ್ದಾರೆ. ಆದರೆ ಅವರಿಂದ ಜಿಲ್ಲೆಗೆ ಯಾವುದೇ ಪ್ರಯೋಜನ ಆಗಿಲ್ಲ. ಸಂಸದ ಅನಂತ್‍ಕುಮಾರ್ ಅವರು ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ್ದಾರೆ. ಬೇರೆ ಯಾವ ನಾಯಕರು ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ರಾಜ್ಯದಲ್ಲೂ ಬಿಎಸ್‍ವೈ ಹಾಗೂ ಶೋಭಾ ಕರಂದ್ಲಾಜೆ, ಅನಂತಕುಮಾರ್ ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಇತರೇ ನಾಯಕರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ದೂರಿದರು.
Advertisement
ನಮ್ಮದು ಹಿಂದುಳಿದ ಜಿಲ್ಲೆಯಾಗಿದ್ದು, ಪ್ರಸ್ತುತ ಶಾಂತಿ ಪ್ರಿಯ ಜಿಲ್ಲೆಯಲ್ಲಿ ಕೋಮು ಗಲಾಟೆ ನಡೆಯುತ್ತಿದೆ. ನಮ್ಮ ಜಿಲ್ಲೆ ಅಭಿವೃದ್ಧಿಯಾಗಿಲ್ಲ. ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿ ಮಾಡಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.
2013 ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಅಸ್ನೋಟಿಕರ್ ಕಾಣೆಯಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಾಣೆಯಾಗಿಲ್ಲ ನಿರಂತರವಾಗಿ ಕಳೆದ ಐದು ವರ್ಷ ಕ್ಷೇತ್ರದ ಜನರ ಜೊತೆ ಸಂಪರ್ಕದಲ್ಲಿ ಇದ್ದು, ಜನರ ಸಮಸ್ಯೆಗಳನ್ನು ನೋಡಿದ್ದೇನೆ. ಈ ಹಿಂದಿನಿಂದಲೂ ಸ್ವಾಭಿಮಾನದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಬಿಜೆಪಿಯಲ್ಲಿ ಬಹಳಷ್ಟು ನೋವು ಕೊಟ್ಟರು. ಬಹಳ ನೋವಾಗಿದೆ. ಹೀಗಾಗಿ ನಮ್ಮ ಜನರ ಆಪೇಕ್ಷೆ ಮೇರೆಗೆ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯವಿದ್ದು, ರಾಜ್ಯಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಅಪಾರವಿದೆ. ಅವರ ಆಡಳಿತದಲ್ಲಿ ಉತ್ತಮ ಕಾರ್ಯಗಳು ನಡೆಯಲಿದೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಶಾಸಕನಾಗಿ ಆಯ್ಕೆಯಾದ 40 ದಿನಗಳಲ್ಲಿ ರಾಜೀನಾಮೆ ನೀಡಿ ಪಕ್ಷಕ್ಕೆ ಬೆಂಬಲ ನೀಡಿದೆ. ಆದರೆ ನಮ್ಮನ್ನು ಇಂದು ವಿಚಾರ ಮಾಡುವವರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅನಂತ್ ಕುಮಾರ್ ಅವರನ್ನು ಎದುರಿಸಲಾಗದೆ ಪಕ್ಷ ತೊರೆಯುತ್ತಿದ್ದಾರೆ ಎಂಬ ಆರೋಪವನ್ನು ಉತ್ತರಿಸಿದ ಅವರು, ಅನಂತ್ ಕುಮಾರ್ ಅವರನ್ನು ಯಾರು ಎದುರಿಸಲು ಸಾಧ್ಯವಿಲ್ಲ. ಅವರು ವಿರುದ್ಧ ಮಾತಾಡುವುದು ನಮ್ಮ ತಪ್ಪಾಗುತ್ತದೆ. ಈ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದರು.
ದೇವೇಗೌಡರು ಮಾತನಾಡಿ ಸಂಕ್ರಾಂತಿಯ ಶುಭ ದಿನ ಆನಂದ್ ಆಸ್ನೋಟಿಕ್ ಪಕ್ಷ ಸೇರ್ಪಡೆಯಾಗಿದ್ದಾರೆ. ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಉತ್ತರ ಕನ್ನಡ ಭಾಗದಲ್ಲಿ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬಿದೆ. ಉತ್ತರ ಕನ್ನಡ ಭಾಗದಲ್ಲಿ 4-5 ಸ್ಥಾನ ಗಳಿಸುವ ವಿಶ್ವಾಸ ಎಂದರು.
ಕುಮಾರಸ್ವಾಮಿ ಮಾತನಾಡಿ ಆಸ್ನೋಟಿಕರ್ ರಂತಹ ಹಲವು ನಾಯಕರು ಬೇರೆ ಬೇರೆ ಪಕ್ಷದಿಂದ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಸೇರ್ಪಡೆಯಾಗಲಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ 113 ಸ್ಥಾನಗಳಿಸಿ ಸರ್ಕಾರ ರಚನೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.