ಶಿವಮೊಗ್ಗ: ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ರಾಜೀನಾಮೆ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಿರಾಕರಿಸಿದ್ದಾರೆ.
ಶಿಕಾರಿಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಾನು ಆ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ. ಮೇ 23ಕ್ಕೆ ನಿಮಗೆ ಎಲ್ಲ ಗೊತ್ತಾಗುತ್ತೆ ಎಂದರು.
ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಶಾಸಕರು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದಿಂದ ಇದ್ದಾರೆ. ಆದರೆ ನಾವು ಸರ್ಕಾರವನ್ನು ಉರುಳಿಸುತ್ತೇವೆ ಎನ್ನುವುದು ಅವರ ಆರೋಪ ಅಷ್ಟೇ. ಮೇ 23 ರಂದು ಬಿಜೆಪಿ ಗೆಲುವಿನ ನಗೆ ಬೀರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದಲ್ಲಿ ಶಾಸಕರ ಅಸಮಾಧಾನ ಹೊಂದಿರುವುದು ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ತಿಳಿದಿದೆ. ಆದ್ದರಿಂದ ಅವರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ. ಅದನ್ನು ಬಿಟ್ಟು ನಮ್ಮ ಮೇಲೆ ಆರೋಪ ಮಾಡಿದರೆ ಹೇಗೆ? ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇರೋದು ನಿಜ ಆಗಿರುವುದಿಂದ ಯಾರಿಗೆ ಅಸಮಾಧಾನ ಇದೆಯೋ ಅವರು ಹೊರಗೆ ಬರುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಹಲವು ಕಾಂಗ್ರೆಸ್ ಶಾಸಕರು ಪಕ್ಷದ ಪರ ಕಾರ್ಯನಿರ್ವಹಿಸದೆ ಸುಮ್ಮನಿದ್ದಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 22 ಸ್ಥಾನ ಗಳಿಸುವುದು ಖಚಿತ. ಆ ವೇಳೆ ಕಾಂಗ್ರೆಸ್, ಜೆಡಿಎಸ್ ಎರಡು ಪಕ್ಷದಲ್ಲಿ ಅಂತರಿಕ ಕಚ್ಚಾಟ ಹೆಚ್ಚಾಗುತ್ತದೆ. ಸರ್ಕಾರ ತನಗೆ ತಾನೇ ಉರುಳುವ ಎಲ್ಲಾ ಲಕ್ಷಣಗಳು ಇವೆ ಎಂದರು.
ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಬೆಳಗಾವಿಯಲ್ಲಿ ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ನಾನು ರಾಜೀನಾಮೆ ನೀಡುವುದು ಖಚಿತ. ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ನನಗೆ ಜವಾಬ್ದಾರಿ ಗೊತ್ತಿದೆ. ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ನಾನಲ್ಲ. ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ದೇಶಕ್ಕೆ ಒಳ್ಳೆಯದಾಗಲಿ ಎಂದು ಮತದಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನೋಡೋಣ ಎಂದರು.