ರಾಯಚೂರು: ಬಿಜೆಪಿ ಸರ್ಕಾರ ಭದ್ರವಾಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಭಿ ಜೋರಾಗಿದೆ. ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಹಿನ್ನೆಲೆ ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಶುರುವಾಗಿದೆ.
ರೆಡ್ಡಿ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ರಾಯಚೂರಿನಲ್ಲಿ ಮಾತನಾಡಿ, ಬಿಜೆಪಿಯಲ್ಲಿ ನಮ್ಮವರು 5 ಜನ ಶಾಸಕರಿದ್ದಾರೆ. ನಮ್ಮವರಿಗೂ ಸಚಿವ ಸ್ಥಾನ ನೀಡಬೇಕು. ಎಲ್ಲಾ ಪಕ್ಷಗಳಿಂದಲೂ ನಮಗೆ ಅನ್ಯಾಯ ಆಗುತ್ತಿದೆ. ಉತ್ತರ ಕರ್ನಾಟಕದಿಂದಲೇ 5 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಮ್ಮ ಸಮಾಜದ ರಾಜ್ಯ ಸಮಿತಿಯಿಂದ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
Advertisement
Advertisement
ಸಚಿವ ಸಂಪುಟದ ವಿಸ್ತರಣೆಯಲ್ಲಿ ನಮಗೆ ಎರಡು ಸಚಿವ ಸ್ಥಾನ ಕೊಡಬೇಕು. ಎರಡು ಆಗದೇ ಇದ್ದರೂ ಒಂದಾದರೂ ಸಚಿವ ಸ್ಥಾನ ಕೊಡಲೇಬೇಕು ಎನ್ನುವುದು ನಮ್ಮ ಪ್ರಬಲವಾದ ಒತ್ತಾಯವಾಗಿದೆ. ವೈಯಕ್ತಿಕ ವರ್ಚಸ್ಸಿನಿಂದಲೂ ನಮ್ಮವರು ಗೆಲ್ಲುವ ಸಾಮಥ್ರ್ಯ ಹೊಂದಿದ್ದಾರೆ ಅಂತ ತಿಳಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಸಮುದಾಯ ನಮ್ಮದು. ಬಿಜೆಪಿ ಸರ್ಕಾರಕ್ಕೆ ನಾವು ಹೆಚ್ಚಿನ ಬೆಂಬಲ ಕೊಡುತ್ತಿದ್ದೇವೆ. ಸಚಿವ ಸ್ಥಾನಕ್ಕೆ ಪರಿಗಣಿಸದಿದ್ದರೆ ಸಭೆ ಕರೆದು ಚರ್ಚೆ ಮಾಡುತ್ತೇವೆ. ನಮ್ಮವರಿಗೆ ಸಚಿವ ಸ್ಥಾನ ಕೊಡದೇ ಇದ್ದರೆ ನಮ್ಮವರಿಗೆ ಅಲ್ಲಿರಬೇಡಿ ಎಂದು ಸೂಚನೆ ನೀಡುತ್ತೇವೆ. ನಮ್ಮ ಸಮುದಾಯಕ್ಕೆ ಮಂತ್ರಿಗಿರಿ ಕೊಡದಿದ್ದ ಮೇಲೆ ನಾವ್ಯಾಕೆ ಅಲ್ಲಿರಬೇಕು ಎಂದು ಶೇಖರಗೌಡ ಮಾಲಿಪಾಟೀಲ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.