– ಆಗಸ್ಟ್ 5ರಂದು ದೆಹಲಿಗೆ ಸಿಎಂ ಪ್ರಯಾಣ
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಆದ ಎಟವಟ್ಟು ಬಿಜೆಪಿ ಸರ್ಕಾರದಲ್ಲಿ ಆಗಬಾರದು ಎಂಬ ಕಾರಣಕ್ಕೆ ಸಚಿವ ಸಂಪುಟ ರಚನೆ ವಿಳಂಬವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆಗಸ್ಟ್ 5ರಂದು ದೆಹಲಿಗೆ ಹೋಗಲಿದ್ದಾರೆ. ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿ ಬೆಂಗಳೂರಿಗೆ ವಾಪಸ್ ಬಂದ ನಂತರ ಸಚಿವ ಸಂಪುಟ ರಚನೆಯಾಗುತ್ತದೆ. ಪಕ್ಷದ ಪ್ರಮುಖರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರಂತಹ ನಾಯಕರು ಸಚಿವ ಸಂಪುಟ ರಚನೆ ವೇಳೆ ಬಿಎಸ್ ಯಡಿಯೂರಪ್ಪ ಅವರಿಗೆ ನೆರವಾಗುತ್ತಾರೆ. ಕೇಂದ್ರದ ವರಿಷ್ಠರು ಮೇಲುಸ್ತುವಾರಿ ವಹಿಸಲಿದ್ದಾರೆ. ಆದರೆ ಸಂಪೂರ್ಣ ಪರಮಾಧಿಕಾರ ಸಿಎಂ ಯಡಿಯೂರಪ್ಪ ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು.
Advertisement
Advertisement
ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ಶಾಸಕರು, ಸಂಸದರು, ಎಂಟು ಮೋರ್ಚಾಗಳ ಸದಸ್ಯರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಆಗಸ್ಟ್ 5ರಂದು ಮೋರ್ಚಾಗಳ ಮುಖಂಡರ ಜೊತೆಗೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
Advertisement
ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಕೆಲವು ಪಕ್ಷಗಳು ದಲಿತರು ಹಾಗೂ ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ. ಅವರಿಂದ ಮತ ಪಡೆದು ಯಾವುದೇ ಸಹಾಯ ಮಾಡದೆ ಕೈಬಿಡುತ್ತಿದ್ದಾರೆ. ಇದು ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಅರ್ಥವಾಗಿದ್ದರಿಂದ ಬಿಜೆಪಿಗೆ ಬೆಂಬಲಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
Advertisement
ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಆಗಸ್ಟ್ 8ರಂದು ರಾಜ್ಯಕ್ಕೆ ಬರುತ್ತಾರೆ. ಸದಸ್ಯತ್ವ ನೋಂದಣಿ ವಿಚಾರದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿ ಇದೆ. 8,787 ಕಾರ್ಯಕರ್ತರು ಸದಸ್ಯತ್ವ ನೋಂದಣಿ ಮಾಡಿಸುವಲ್ಲಿ ಫುಲ್ ಟೈಮ್ ಕೆಲಸ ನಿರ್ವಹಿಸುತ್ತಿದ್ದಾರೆ. ಆಗಸ್ಟ್ 3, 4, 10 ಹಾಗೂ 11ರಂದು ಫುಲ್ ಡೇ ಸದಸ್ಯತ್ವ ನೋಂದಣಿ ದಿನಗಳಾಗಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಕರೆ ಮಾಡಿ, ಆಗಸ್ಟ್ 9ರಂದು ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜೊತೆಗೆ ಸಂಪುಟ ರಚನೆಗೂ ಮುನ್ನ ಆಗಸ್ಟ್ 7ರಂದು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ಅಮಿತ್ ಶಾ ಅವರು ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಕುರಿತು ಸಿಎಂ ಅವರಿಗೆ ತಿಳಿಸಲಿದ್ದಾರೆ. ಈ ನಿಟ್ಟಿನಲ್ಲಿ ಅಮಿತ್ ಶಾ ಅವರು ಈಗಾಗಲೇ ಪಟ್ಟಿ ಸಿದ್ಧಪಡಿಸಿದ್ದಾರೆ. ಆ ಪಟ್ಟಿ ಪ್ರಕಾರವೇ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಖಡಕ್ ಸೂಚನೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.