– ಅಮಿತ್ ಶಾ ಹೇಳಿದವರಿಗಷ್ಟೇ ಸಿಗಲಿದೆ ಮಂತ್ರಿಗಿರಿ
ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಾಗಿ ವಾರ ಕಳೆದರೂ ಸಚಿವ ಸಂಪುಟ ರಚನೆಯಾಗಿಲ್ಲ. ಬಿಜೆಪಿಯ ಅನೇಕ ಶಾಸಕರು ಮಂತ್ರಿಗಿರಿ ಆಕಾಂಕ್ಷಿಗಳಾಗಿದ್ದು, ಸಚಿವ ಸಂಪುಟ ರಚನೆಗಾಗಿ ಕಾಯುತ್ತಿದ್ದಾರೆ.
ಕೊನೆಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಕರೆ ಮಾಡಿ, ಆಗಸ್ಟ್ 9ರಂದು ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜೊತೆಗೆ ಸಂಪುಟ ರಚನೆಗೆ ಮುನ್ನ ಆಗಸ್ಟ್ 7ರಂದು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
Advertisement
ಈ ಮೂಲಕ ಅಮಿತ್ ಶಾ ಅವರು ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಕುರಿತು ಸಿಎಂ ಅವರಿಗೆ ತಿಳಿಸಲಿದ್ದಾರೆ. ಈ ನಿಟ್ಟಿನಲ್ಲಿ ಅಮಿತ್ ಶಾ ಅವರು ಈಗಾಗಲೇ ಪಟ್ಟಿ ಸಿದ್ಧಪಡಿಸಿದ್ದಾರೆ. ಆ ಪಟ್ಟಿ ಪ್ರಕಾರವೇ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಖಡಕ್ ಸೂಚನೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎನ್ನುವ ನಿರ್ಧಾರ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಅಮಿತ್ ಶಾ ಅವರು, ಮಂತ್ರಿಗಿರಿ ಲಾಬಿ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಜಿಲ್ಲಾವಾರು ಶಾಸಕರ ರಿಪೋರ್ಟ್ ಗಳನ್ನು ತರಿಸಿಕೊಂಡಿದ್ದಾರೆ. ಈ ಮೂಲಕ ಯಡಿಯೂರಪ್ಪನವರ ಕೈಯಲ್ಲಿರುವ ಎರಡು ಪಟ್ಟಿಗಳನ್ನು ತಾಳೆ ಮಾಡಿ ಫೈನಲ್ ಲಿಸ್ಟ್ ಸಿದ್ಧಗೊಳಿಸಲಿದ್ದಾರೆ. ಇದೇ ತಿಂಗಳ 8 ಅಥವಾ 9 ರಂದು ಸಚಿವ ಸಂಪುಟ ರಚನೆ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.