-ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ
-ದೊರೆಸ್ವಾಮಿ ಅವ್ರೇ ಪಕ್ಷದ ವಕ್ತಾರರ ರೀತಿ ಮಾತಾಡಬೇಡಿ
ಮೈಸೂರು: ರಾಜ್ಯ ಬಜೆಟ್ ಮಂಡನೆ ವಿಚಾರದ ಬಗ್ಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಜೆಟ್ ಮಂಡನೆ ಕೇವಲ ಶಾಸ್ತ್ರವಾಗಬಾರದು. ಬಜೆಟ್ ಸರ್ಕಾರದ ಜನಪ್ರಿಯತೆ ಹೆಚ್ಚಿಸುವುದಲ್ಲ. ಜನರ ಅನುಕೂಲಕ್ಕಾಗಿ ಬಜೆಟ್ ಮಾಡಬೇಕು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಹೆಚ್. ವಿಶ್ವನಾಥ್, ಮಾತೆತ್ತಿದರೆ 14 ಬಾರಿ ಬಜೆಟ್ ಮಂಡನೆ ಅಂತಾರೆ, ಆದರೆ ಬಜೆಟ್‍ನಲ್ಲಿ ಆರ್ಥಿಕ ಶಿಸ್ತು ಶಿಷ್ಟಾಚಾರ ತರಲು ಅವರ ಕೈಯಲ್ಲಿ ಆಗಲಿಲ್ಲ. ರಾಜ್ಯಕ್ಕೆ ಮೂರು ಲಕ್ಷ ಕೋಟಿ ಸಾಲದ ಹೊರೆ ಇದೆ. ಅದರಲ್ಲಿ ಸಿದ್ದರಾಮಯ್ಯ ಅವರದ್ದೇ ಒಂದೂವರೆ ಲಕ್ಷ ಕೋಟಿ ಸಾಲದ ಪಾಲಿದೆ. ಮಾಜಿ ಮುಖ್ಯಮಂತ್ರಿ ಪರಮಾಧಿಕಾರದ ಹೆಸರಿನಲ್ಲಿ ಜನರನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದೀರಿ. ಬಜೆಟ್ ಬಗ್ಗೆ ಯಡಿಯೂರಪ್ಪ ಅವರಿಗೆ ಸಲಹೆ ನೀಡಿ ಎಂದು ಹೇಳಿದರು.
ಯಡಿಯೂರಪ್ಪನವರೇ ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ. ಬೇಕಾಬಿಟ್ಟಿ ಯೋಜನೆಗಳ ಘೋಷಣೆ ಬೇಡ. ಉಳಿತಾಯದ ಬಜೆಟ್ ಮಾಡಿ. ಎಲ್ಲಾ ಸಿಎಂಗಳು 10 ವರ್ಷದ ಬಜೆಟ್ ಮಾಡಿದ್ದಾರೆ. ನೀವು ಕೇವಲ ಒಂದು ವರ್ಷದ ಬಜೆಟ್ ಮಂಡನೆ ಮಾಡಿ ಸಾಕು ಎಂದು ಸಲಹೆ ನೀಡಿದರು.
ಪಕ್ಷದ ವಕ್ತಾರರ ರೀತಿ ಮಾತಾಡಬೇಡಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಹೆಚ್.ಎಸ್.ದೊರೆಸ್ವಾಮಿ ಕುರಿತು ಶಾಸಕ ಯತ್ನಾಳ್ ನೀಡಿರುವ ಹೇಳಿಕೆ ಬಗ್ಗೆ ಹೆಚ್.ವಿಶ್ವನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ಇಬ್ಬರದು ತಪ್ಪಿದೆ. ದೊರೆ ಸ್ವಾಮಿಯವರು ಒಂದು ಪಕ್ಷದ ಪರವಾಗಿ ಮಾತನಾಡಬಾರದು. ಅವರ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ. ಅವರು ಎಲ್ಲದಕ್ಕೂ ಬಾಯಿ ಹಾಕಬಾರದು ತಲೆ ಹಾಕಬಾರದು. ಪಕ್ಷದ ವಕ್ತಾರರಂತೆ ಮಾತನಾಡಬಾರದು. ನಿಮ್ಮ ಗೌರವ ಉಳಿಸಿಕೊಳ್ಳಿ. ರಾಜಕೀಯದ ಕೊಳಚೆಗೆ ಹೋಗಿ ಬೀಳಬೇಡಿ. ರಾಜಕೀಯ ಪಕ್ಷಗಳಿಗೆ ನೀವು ದಾಳವಾಗಬೇಡಿ ಎಂದು ತಿಳಿಸಿದರು.