– ರಾಜಕೀಯ ಬೇರೆ, ಮನುಷ್ಯ ಸಂಬಂಧಗಳು ಬೇರೆ
– ಬಿಎಸ್‍ವೈರನ್ನ ಹಾಡಿ ಹೊಗಳಿದ ಮಾಜಿ ಸಿಎಂ
– ಸಿಎಂಗೆ ಒತ್ತಡ ಸಹಿಸಿಕೊಳ್ಳುವ ಶಕ್ತಿಯನ್ನ ದೇವ್ರು ಕೊಡಲಿ
– ಹೌದೋ ಹುಲಿಯಾ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು
ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಸಿಎಂ ಯಡಿಯೂರಪ್ಪ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಷಣಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಕೂಗಿದಾಗ ಚಪ್ಪಾಳೆ, ಶಿಳ್ಳೆ ಕೇಳಿ ಬಂದವು. ಜೊತೆಗೆ ಕೆಲ ಕಾರ್ಯಕರ್ತರು ಹೌದೋ ಹುಲಿಯಾ ಘೋಷಣೆ ಕೂಗಿದರು.
ಭಾಷಣ ಆರಂಭಿಸಿದ ಮಾಜಿ ಸಿಎಂ, ಕಾರ್ಯಕ್ರಮಕ್ಕೆ ಬರುವಂತೆ ಯಡಿಯೂರಪ್ಪ ಅವರ ಅಭಿಮಾನಿಗಳು ನನಗೂ ಆಹ್ವಾನ ಕೊಟ್ಟಿದ್ದರು. ನಾನು ಬರಲು ಒಪ್ಪಿಕೊಂಡೆ. ನಾವು ಎಷ್ಟೇ ದೀರ್ಘ ಕಾಲ ರಾಜಕಾರಣದಲ್ಲಿ ಇದ್ದರೂ, ಪರಸ್ಪರ ವಿರೋಧಿಸುತ್ತಿದ್ದರೂ ಮನುಷ್ಯ ಸಂಬಂಧಗಳನ್ನು ನಿರಾಕರಿಸಬಾರದು. ನಾವು ಮೂಲಭೂತವಾಗಿ ಮನುಷ್ಯರು. ನಮ್ಮ ಸಿದ್ಧಾಂತಗಳು, ವಿಚಾರಗಳು ಬೇರೆ ಬೇರೆ. ಅಂತಿಮವಾಗಿ ಪ್ರಜೆಗಳೇ ಪ್ರಭುಗಳು, ಅವರೇ ತೀರ್ಮಾನ ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ಇದನ್ನೂ ಓದಿ: ರಾಜಾಹುಲಿ ಬರ್ತ್ ಡೇಗೆ ಟಗರು ಆಗಮನ – ಕೈಹಿಡಿದು ಕರೆದೊಯ್ದ ಸಿಎಂ
ವೈಯಕ್ತಿಕ ಸಂಬಂಧಕ್ಕೆ ರಾಜಕಾರಣ ಅಡ್ಡಿ ಬರಬಾರದು ಅಂತ ನಾನು ನಂಬಿದ್ದೇನೆ. ಸಿಎಂ ಯಡಿಯೂರಪ್ಪ ಅವರು 77 ವಸಂತ ತುಂಬಿ 78 ಕ್ಕೆ ಕಾಲಿಡುತ್ತಿದ್ದಾರೆ. ನಾನು ಅವರಿಗೆ ಹೃದಯ ಪೂರ್ವಕ ಶುಭ ಕೋರುತ್ತೇನೆ. ಅವರು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಲಿ ಎಂದು ಹಾರೈಸಿದರು. ಇದನ್ನೂ ಓದಿ: ತವರು ಜಿಲ್ಲೆಗೆ ಸಿಎಂ ಬರ್ತ್ ಡೇ ಗಿಫ್ಟ್
ಮನುಷ್ಯ ಎಷ್ಟು ವರ್ಷ ಬದುಕಿದ ಅನ್ನೋದು ಮುಖ್ಯವಲ್ಲ. ಎಷ್ಟು ಕ್ರಿಯಾಶೀಲವಾಗಿ ಬದುಕಿದ ಅನ್ನೋದು ಮುಖ್ಯವಾಗುತ್ತದೆ. ಸಿಎಂ ಯಡಿಯೂರಪ್ಪ ನೇರವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬರಲಿಲ್ಲ. ನಾನು ಮತ್ತು ಯಡಿಯೂರಪ್ಪ ಅವರು 1983ರಲ್ಲಿ ವಿಧಾನಸಭೆಗೆ ಕಾಲಿಟ್ವಿ. ನನಗಿಂತ ಐದು ವರ್ಷ ಮುಂಚೆ ಅವರು ಸಿಎಂ ಆದ್ರು. ಅವರು ನನಗಿಂತ ನಾಲ್ಕೈದು ವರ್ಷ ದೊಡ್ಡವರು. ನಾನು ಕೂಡ ಒಂದು ಬಾರಿ ಮುಖ್ಯಮಂತ್ರಿಯಾದೆ. ಆದರೆ ಯಡಿಯೂರಪ್ಪ ನಾಲ್ಕು ಸಲ ಸಿಎಂ ಆದ್ರು ಎಂದು ರಾಜಕೀಯದ ಹಾದಿ ನೆನೆದರು.
ಸಿಎಂ ಯಡಿಯೂರಪ್ಪ ಹೋರಾಟದ ಹಾದಿಯಿಂದ ಬಂದವರು. ಹೋರಾಟದ ಹಾದಿಯಿಂದ ಬಂದವರಿಗೆ ಮಾತ್ರ ಜನರ ಬದುಕು ಅರ್ಥ ಆಗುತ್ತದೆ. ಇದು ಎಲ್ಲರಿಗೂ ಅರ್ಥ ಆಗಿರುತ್ತದೆ ಅಂತ ನಾನು ಭಾವಿಸುತ್ತೇನೆ. ರಾಜಕೀಯ ನಮ್ಮನ್ನು ಕೈಬೀಸಿ ಕರೆಯಲ್ಲ ಎಂದು ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದರು. ಇದನ್ನೂ ಓದಿ: ಬಿಎಸ್‍ವೈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರನ್ನು ಹೊಗಳಿದ ರಾಜನಾಥ್ ಸಿಂಗ್
ರಾಜಕಾರಣದಲ್ಲಿ ಸಿಎಂ ಯಡಿಯೂರಪ್ಪ ದೀರ್ಘ ಕಾಲದಿಂದ ಇದ್ದಾರೆ. ಇಡೀ ರಾಜ್ಯದ ಚಿತ್ರಣ ಕೆಲವರಿಗೆ ಮಾತ್ರ ಗೊತ್ತು. ಅಂತವರಲ್ಲಿ ಯಡಿಯೂರಪ್ಪ ಸಹ ಒಬ್ಬರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವರ ಶ್ರಮವಿದೆ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಸಿಎಂ ಆಗಿರುವುದರಿಂದ ಸಹಜವಾಗಿ ಅವರಿಗೂ ಸಾಕಷ್ಟು ಒತ್ತಡಗಳಿವೆ. ಅವರು ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ದೇವರು ಅವರಿಗೆ ಕೊಡಲಿ ಎಂದು ಬೇಡಿಕೊಂಡರು.
ಸಿದ್ದರಾಮಯ್ಯ ಅವರ ಭಾಷಣದ ಬಳಿಕ ಮಾತನಾಡಿದ ಕಾರ್ಯಕ್ರಮ ನಿರೂಪಕ, ಸಚಿವ ಸಿಟಿ ರವಿ ಮಾತನಾಡಿ, ಸಿದ್ದರಾಮಯ್ಯ ಅವರು ಪ್ರತಿಯೊಂದು ಮಾತಿಗೂ ಶಕ್ತಿ ತುಂಬಿದರು. ಅದಕ್ಕೆ ಕಾರಣ ವೇದಿಕೆ ಮೇಲೆ ರಾಜಾಹುಲಿ, ಹೌದೋ ಹುಲಿಯಾ ಒಟ್ಟಿಗೆ ಇರುವುದು. ಇದು ಖುಷಿ ತಂದಿದೆ ಎಂದು ಹೇಳಿದರು.