ಬೆಂಗಳೂರು: 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಬಿಜೆಪಿ ಜಯಗಳಿಸಿದ್ದು ಬಿಎಸ್‍ವೈ ಅಗ್ನಿಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಈ ಮೂಲಕ ಇನ್ನು ಮೂರುವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ.
ಸರ್ಕಾರ ಉಳಿಯಬೇಕಾದರೆ ಕನಿಷ್ಟ 6 ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆಯಲ್ಲಿತ್ತು. ಆದರೆ ಬಿಜೆಪಿ 12 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಅದರಲ್ಲೂ ಮಂಡ್ಯದ ಕೆ.ಆರ್ ಪೇಟೆಯಲ್ಲಿ ನಾರಾಯಣ ಗೌಡ ಗೆದ್ದು ಇತಿಹಾಸ ಸೃಷ್ಟಿಯಾಗಿದೆ. ಹಳೆ ಮೈಸೂರು ಭಾಗದ ಎರಡು ಕಡೆ ಕಮಲ ಅರಳಿದ್ದು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ.
Advertisement
Advertisement
ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ವೋಟ್?
1 ಕೆ.ಆರ್.ಪೇಟೆ – ಮಂಡ್ಯ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆಯನ್ನು ತೆರೆದಿದ್ದು, ನಾರಾಯಣ ಗೌಡ 9,728 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರ 66,087 ಮತಗಳು ಬಿದ್ದರೆ ಜೆಡಿಎಸ್ ಅಭ್ಯರ್ಥಿ ದೇವರಾಜ್ ಪರ 56,359 ಮತ ಬಿದ್ದಿದೆ. ಕಾಂಗ್ರೆಸ್ ಪರ 41,673 ಮತಗಳು ಚಲಾವಣೆಯಾಗಿದೆ. ಕಳೆದ ಚುನಾವಣೆಯಲ್ಲಿ ನಾರಾಯಣ ಗೌಡ 17,119 ಮತಗಳಿಂದ ಜಯಗಳಿಸಿದ್ದರೆ ಬಿಜೆಪಿಗೆ 9,819 ಮತಗಳು ಮಾತ್ರ ಬಿದ್ದಿತ್ತು.
Advertisement
Advertisement
2. ಹೊಸಕೋಟೆ – ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ 11,484 ಮತಗಳ ಅಂತರದಿಂದ ಎಂಟಿಬಿ ನಾಗರಾಜ್ ವಿರುದ್ಧ ಜಯಗಳಿಸಿದ್ದಾರೆ. ಶರತ್ ಬಚ್ಚೇಗೌಡರಿಗೆ 81,667 ಮತಗಳು ಬಿದ್ದರೆ ಎಂಟಿಬಿ ನಾಗರಾಜ್ ಅವರಿಗೆ 70,183 ಮತಗಳು ಬಿದ್ದಿತ್ತು. ಜೆಡಿಎಸ್ ಪರವಾಗಿ 41,443 ವೋಟ್ ಚಲಾವಣೆಯಾಗಿದೆ. ಕಳೆದ ಬಾರಿ ಶರತ್ ಬಚ್ಚೇಗೌಡ ವಿರುದ್ಧ 7,597 ಮತಗಳ ಅಂತರದಿಂದ ಜಯಗಳಿಸಿದ್ದರು. ಶರತ್ ಬಚ್ಚೇಗೌಡ ಅವರಿಗೆ 91,227 ಮತಗಳು ಬಿದ್ದಿತ್ತು.
3. ಹುಣಸೂರು – ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿಯ ವಿಶ್ವನಾಥ್ ಸೋತಿದ್ದಾರೆ. ಬಿಜೆಪಿ ಪರವಾಗಿ 52,998 ಮತಗಳು ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 92,725 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ 8,575 ಮತಗಳ ಅಂತರದಿಂದ ಗೆದ್ದ ವಿಶ್ವನಾಥ್ ಈ ಬಾರಿ 39,727 ಮತಗಳ ಅಂತರದಿಂದ ಸೋತಿದ್ದಾರೆ.
4. ಹಿರೇಕೆರೂರು – ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದ ಬಿಸಿ ಪಾಟೀಲ್ 29,076 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪರ 85,562 ಮತಗಳು ಚಲಾವಣೆಗೊಂಡರೆ ಕಾಂಗ್ರೆಸ್ ಪರ 56,495 ಮತಗಳು ಚಲಾವಣೆಗೊಂಡಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಬಣಕಾರ್ ವಿರುದ್ಧ ಕೇವಲ 555 ಮತಗಳಿಂದ ಜಯಗಳಿಸಿದ್ದ ಬಿಸಿ ಪಾಟೀಲ್ ಈ ಬಾರಿ ತಮ್ಮ ಗೆಲುವಿನ ಅಂತರವನ್ನು 29 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದಾರೆ.
5. ಚಿಕ್ಕಬಳ್ಳಾಪುರ – ಹಳೆ ಮೈಸೂರು ಭಾಗದ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯವೇ ಜಾಸ್ತಿ. ಆದರೆ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿದೆ. ಮೆಡಿಕಲ್ ಕಾಲೇಜು ತರುತ್ತೇನೆ ಎಂಬ ಸುಧಾಕರ್ ಭರವಸೆ ಕೆಲಸ ಮಾಡಿದ್ದು 34,801 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 84,389 ಮತಗಳು ಬಿದ್ದರೆ ಕಾಂಗ್ರೆಸ್ ಪರವಾಗಿ 49,588 ಮತಗಳು ಬಿದ್ದಿದೆ. ಜೆಡಿಎಸ್ 35,869 ಮತಗಳನ್ನು ಪಡೆದಿದೆ. 2018ರ ಚುನಾವಣೆಯಲ್ಲಿ ಸುಧಾಕರ್ 45,177 ಮತಗಳಿಂದ ಜಯಗಳಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿವಿ ಮಂಜುನಾಥ್ ಅವರಿಗೆ 5,576 ಮತಗಳು ಬಿದ್ದಿತ್ತು.
6. ವಿಜಯನಗರ – ಬಳ್ಳಾರಿಯ ವಿಜಯನಗರದ ಕಿಂಗ್ ನಾನೇ ಎಂಬುದನ್ನು ಆನಂದ್ ಸಿಂಗ್ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. 30,207 ಮತಗಳಿಂದ ಗೆಲ್ಲುವ ಮೂಲಕ ಕಾಂಗ್ರೆಸ್ಸಿನ ಬಳ್ಳಾರಿ ರಾಜಕೀಯಕ್ಕೆ ತಿರುಗೇಟು ನೀಡಿದ್ದಾರೆ. ಬಿಜೆಪಿ 85,332 ಮತಗಳನ್ನು ಪಡೆದರೆ, ಕಾಂಗ್ರೆಸ್ 55,270 ಮತಗಳನ್ನು ಪಡೆದಿದೆ. 2018ರಲ್ಲಿ ಬಿಜೆಪಿಯ ಗವಿಯಪ್ಪ ವಿರುದ್ಧ 8,228 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
7. ಯಶವಂತಪುರ – ಎಸ್.ಟಿ. ಸೋಮಶೇಖರ್ ಅವರು 27,686 ಮತಗಳ ಅಂತರದಿಂದ ಗೆಲ್ಲುವ ಮೂಲಕ ಯಶವಂತಪುರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಿಜೆಪಿ ಪರವಾಗಿ 1,44,676 ಮತಗಳು ಬಿದ್ದರೆ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಜವರಾಯಿಗೌಡ 1,16,990 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಕೇವಲ 15,707 ಮತಗಳನ್ನು ಪಡೆದಿದೆ. ಕಳೆದ ಚುನಾವಣೆಯಲ್ಲಿ ಸೋಮಶೇಖರ್ 10,711 ಮತಗಳಿಂದ ಗೆದ್ದಿದ್ದರು.
8. ಗೋಕಾಕ್ – ದೋಸ್ತಿ ಸರ್ಕಾರದ ವಿರುದ್ಧ ಆರಂಭದಲ್ಲೇ ಬಂಡಾಯ ಎದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ 27,973 ಮತಗಳಿಂದ ಗೆದ್ದಿದ್ದಾರೆ. ಬಿಜೆಪಿ ಪರ 86,060 ಮತಗಳು ಚಲಾವಣೆಗೊಂಡರೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿಗೆ 58,736 ಮತಗಳು ಬಿದ್ದಿದೆ. ಕಳೆದ ಚುನಾವಣೆಯಲ್ಲಿ 14,280 ಮತಗಳಿಂದ ಜಾರಕಿಹೊಳಿ ಜಯಗಳಿಸಿದ್ದರು.
9. ರಾಣೆಬೆನ್ನೂರು – ಬಿಜೆಪಿಯ ಅರುಣ್ ಕುಮಾರ್ 23,222 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದು ಕಣ್ಣೀರು ಹಾಕಿದ್ದರೂ ಜನ ಕಾಂಗ್ರೆಸ್ಸಿನ ಕೋಳಿವಾಡ ಅವರನ್ನು ಸೋಲಿಸಿದ್ದಾರೆ. ಬಿಜೆಪಿ 95,438 ಮತಗಳನ್ನು ಪಡೆದರೆ ಕಾಂಗ್ರೆಸ್ 72,216 ಮತಗಳನ್ನು ಪಡೆದಿದೆ. 2018ರಲ್ಲಿ ಕೆಪಿಜೆಪಿಯಿಂದ ಸ್ಪರ್ಧಿಸಿದ್ದ ಆರ್ ಶಂಕರ್ 4,338 ಮತಗಳಿಂದ ಗೆದ್ದಿದ್ದರು. ಮೂರನೇ ಸ್ಥಾನ ಪಡೆದ ಬಿಜೆಪಿಗೆ 48,973 ಮತಗಳು ಬಿದ್ದಿತ್ತು.
10. ಕಾಗವಾಡ – 18,557 ಮತಗಳ ಅಂತರದಿಂದ ಶ್ರೀಮಂತ ಪಾಟೀಲ್ ಜಯಗಳಿಸಿದ್ದಾರೆ. ಬಿಜೆಪಿ 76,952 ಮತಗಳನ್ನು ಪಡೆದರೆ, ಕಾಂಗ್ರೆಸ್ 58,395 ಮತಗಳನ್ನು ಪಡೆದಿದೆ. ಜೆಡಿಎಸ್ 2,448 ಮತಗಳನ್ನು ಮಾತ್ರ ಪಡೆಯಲು ಶಕ್ತ್ಯವಾಯಿತು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ 32,942 ಮತಗಳ ಅಂತರದಿಂದ ಶ್ರೀಮಂತ ಪಾಟೀಲ್ ಜಯಗಳಿಸಿದ್ದರು.
11. ಯಲ್ಲಾಪುರ – ಶಿವಾರಂ ಹೆಬ್ಬಾರ್ 31,406 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ಪರ 80,440 ಮತ, ಕಾಂಗ್ರೆಸ್ ಪರ 49,034 ಮತಗಳು ಚಲಾವಣೆಗೊಂಡರೆ ಜೆಡಿಎಸ್ ಪರವಾಗಿ 1,235 ಮತಗಳು ಬಿದ್ದಿದೆ. 1,444 ಮಂದಿ ನೋಟಾಗೆ ಮತ ಒತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ 1,483 ಮತಗಳಿಂದ ಶಿವರಾಂ ಹೆಬ್ಬಾರ್ ಗೆದ್ದಿದ್ದರು.
12. ಮಹಾಲಕ್ಷ್ಮಿ ಲೇಔಟ್ – ಜೆಡಿಎಸ್ ನಿಂದ ಅನರ್ಹಗೊಂಡಿದ್ದ ಗೋಪಾಲಯ್ಯ 54,386 ಮತಗಳಿಂದ ಜಯಗಳಿಸಿದ್ದಾರೆ. ಬಿಜೆಪಿ 85,889 ಮತಗಳನ್ನು ಪಡೆದರೆ, ಕಾಂಗ್ರೆಸ್ 31,503 ಜೆಡಿಎಸ್ 23,516 ಮತಗಳನ್ನು ಪಡೆದಿದೆ. 2018ರ ಚುನಾವಣೆಯಲ್ಲಿ 41,100 ಮತಗಳ ಅಂತರದಿಂದ ಬಿಜೆಪಿಯ ನರೇಂದ್ರ ಬಾಬು ಅವರನ್ನು ಸೋಲಿಸಿದ್ದರು.
13. ಕೆ.ಆರ್.ಪುರಂ – ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಭೈರತಿ ಬಸವರಾಜ್ 63,405 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 1,39,833, ಕಾಂಗ್ರೆಸ್ ಪರವಾಗಿ 76,428 ಮತಗಳು ಚಲಾವಣೆಯಾದರೆ ಜೆಡಿಎಸ್‍ಗೆ 2,048 ಮತಗಳು ಬಿದ್ದಿದೆ. 2018ರ ಚುನಾವಣೆಯಲ್ಲಿ 32,729 ಮತಗಳಿಂದ ಭೈರತಿ ಬಸವರಾಜ್ ಜಯಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ನಂದೀಶ್ ರೆಡ್ಡಿ ಅವರಿಗೆ 1,02,675 ಮತಗಳು ಬಿದ್ದಿತ್ತು.
14. ಅಥಣಿ – ಮಹೇಶ್ ಕುಮಟಳ್ಳಿ 39,918 ಮತಗಳಿಂದ ಜಯಗಳಿಸಿದ್ದಾರೆ. ಕುಮಟಳ್ಳಿ 99,114 ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಬಾಲಚಂದ್ರ ಅವರು 59,196 ಮತಗಳನ್ನು ಪಡೆದಿದ್ದಾರೆ. 2018ರ ಚುನಾವಣೆಯಲ್ಲಿ ಹಾಲಿ ಸಾರಿಗೆ ಸಚಿವರಾಗಿರುವ ಲಕ್ಷ್ಮಣ್ ಸವದಿ ವಿರುದ್ಧ ಕುಮಟಳ್ಳಿ 2,331 ಮತಗಳಿಂದ ಜಯಗಳಿಸಿದ್ದರು.
15. ಶಿವಾಜಿನಗರ – ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ 13,520 ಮತಗಳ ಅಂತರದಿಂದ ಗೆದ್ದಿದ್ದಾರೆ. ರಿಜ್ವಾನ್ 49,887 ಮತಗಳನ್ನು ಪಡೆದರೆ ಬಿಜೆಪಿಯ ಶರವಣ 36,367 ಮತಗಳನ್ನು ಪಡೆದಿದ್ದಾರೆ. 2018ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ರೋಶನ್ ಬೇಗ್ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ವಿರುದ್ಧ 15,040 ಮತಗಳ ಅಂತರದಿಂದ ಜಯಗಳಿಸಿದ್ದರು.