ಹಾವೇರಿ: ಕೊಡಗಿನ ಜನ ಜಲಪ್ರಳಯಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಇಡೀ ರಾಜ್ಯವೇ ಕೊಡಗಿನ ಸಂತ್ರಸ್ತರ ನೋವಿಗೆ ಸ್ಪಂದಿಸಿದೆ. ಆದರೆ ಇಲ್ಲಿಬ್ಬರು ಬಾಲಕರು ಕೊಡಗಿನ ಸಂತ್ರಸ್ತರಿಗಾಗಿ ಹೆಜ್ಜೆ ಹಾಕುತ್ತಿದ್ದಾರೆ. ‘ನನ್ನ ಹೆಜ್ಜೆ ಅವರಿಗಾಗಿ’ ಎನ್ನುವ ಬ್ಯಾನರ್ ಹಾಕಿ 15 ವರ್ಷದೊಳಗಿನ ಇಬ್ಬರು ಸಹೋದರರು ಶಾಲಾ ಕಾಲೇಜು, ಮಠ ಸೇರಿದಂತೆ ವಿವಿಧೆಡೆ ತೆರಳಿ ನೃತ್ಯ ಪ್ರದರ್ಶನ ನೀಡಿ ಕೊಡಗಿನ ಜನರ ನೋವಿಗೆ ಸ್ಪಂದಿಸುವಂತೆ ಪ್ರೇರೆಪಿಸುತ್ತಿದ್ದಾರೆ.
ಪೃಥ್ವಿ ಮತ್ತು ಪಾರ್ಥ ನೃತ್ಯ ಪ್ರದರ್ಶನ ಮಾಡುತ್ತಿರೋ ಈ ಬಾಲಕರು ಮೂಲತಃ ಹಾವೇರಿ ನಗರದವರು. ಪೃಥ್ವಿ 7ನೇ ತರಗತಿಯಲ್ಲಿ ಓದುತ್ತಿದರೆ, ಆತನ ಸಹೋದರ ಪಾರ್ಥ 4ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇಬ್ಬರೂ ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಪೃಥ್ವಿ ನೃತ್ಯದ ಮೂಲಕ ಈಗಾಗಲೇ ತನ್ನದೇ ಆದ ಹೆಸರು ಮಾಡಿದ್ದಾನೆ. ಅನೇಕ ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾನೆ.
Advertisement
Advertisement
ಈಗ ಕೊಡಗಿನ ಜನರ ನೋವಿಗೆ ಸ್ಪಂದಿಸಲು ತನ್ನ ಸಹೋದರನನ್ನು ಕರೆದುಕೊಂಡು ಶಾಲೆ, ಮಠ, ಕಾಲೇಜುಗಳಲ್ಲಿ ಹೆಜ್ಜೆ ಹಾಕುತ್ತಿದ್ದಾನೆ. ನೃತ್ಯದ ಮೂಲಕ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ರಂಜಿಸಿ ಕೊಡಗಿನ ಸಂತ್ರಸ್ತರಿಗೆ ನೆರವಾಗುವಂತೆ ಪ್ರೇರೆಪಿಸುತ್ತಿದ್ದಾರೆ. ಹೋದಲ್ಲೆಲ್ಲ ಮನರಂಜನೆ ಜೊತೆಗೆ ಮನಸ್ಸು ಕರಗುವಂತೆ ನೃತ್ಯ ಮಾಡಿ ಕೊಡಗಿನ ಸಂತ್ರಸ್ತರ ನಿಧಿ ಪೆಟ್ಟಿಗೆಗೆ ಹಣ ಹಾಕುವಂತೆ ಮಾಡುತ್ತಿದ್ದಾರೆ. ಸಂಗ್ರಹವಾದ ಹಣವನ್ನು ಆಯಾ ಶಾಲೆಯವರೆ ಜಿಲ್ಲಾಡಳಿತದ ಮೂಲಕ ಸಂತ್ರಸ್ತರಿಗೆ ತಲುಪಿಸುತ್ತಿದ್ದಾರೆ.
Advertisement
Advertisement
ಪೃಥ್ವಿ ಮತ್ತು ಪಾರ್ಥ ಕೊಡಗಿನ ಸಂತ್ರಸ್ತರಿಗಾಗಿ ಈಗಾಗಲೇ ಮೂರು ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಮೂರು ಕಡೆಗಳಲ್ಲಿ ಮೂರು ನೃತ್ಯಗಳನ್ನ ಪ್ರದರ್ಶಿಸಿ ನಿಧಿ ಸಂಗ್ರಹಿಸುತ್ತಿದ್ದಾರೆ. ನನ್ನ ಹೆಜ್ಜೆ ಅವರಿಗಾಗಿ ಅನ್ನೋ ಬ್ಯಾನರ್ ಮೂಲಕ ನೃತ್ಯ ಪ್ರದರ್ಶಿಸಿ ಸಂಗ್ರಹವಾದ ನಿಧಿಯನ್ನು ಆಯಾ ಸಂಸ್ಥೆಯವರಿಗೆ ನೀಡಲಾಗುತ್ತೆ. ಪುಟ್ಟ ಪೋರರು ಮಾಡುತ್ತಿರೋ ನೃತ್ಯಕ್ಕೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಮಕ್ಕಳ ಪೋಷಕರು ಕೊಡಗು ಮತ್ತು ಕೇರಳ ಸಂತ್ರಸ್ತರ ನೋವಿಗೆ ಮಿಡಿಯುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ಕೈಲಾದಷ್ಟು ಹಣವನ್ನು ನಿಧಿ ಪೆಟ್ಟಿಗೆಗೆ ಹಾಕುತ್ತಿದ್ದಾರೆ.
ಪುಟ್ಟ ಮಕ್ಕಳು ಮಾಡುತ್ತಿರೋ ಕೊಡಗಿನ ಸಂತ್ರಸ್ತರ ನೋವಿಗೆ ಸ್ಪಂಧಿಸೋ ಕೆಲಸಕ್ಕೆ ಮಕ್ಕಳ ತಂದೆ ತಾಯಿ ಸಾಥ್ ನೀಡುತ್ತಿದ್ದಾರೆ. ಇಬ್ಬರು ಮಕ್ಕಳು ಶಾಲೆ ಮುಗಿದ ನಂತರ ಮತ್ತು ಶಾಲಾ ಬಿಡುವಿನ ವೇಳೆಯಲ್ಲಿ ಈ ರೀತಿಯ ನೃತ್ಯ ಪ್ರದರ್ಶಿಸಿ ಜನರ ಮನಸೂರೆಗೊಂಡು ಕೊಡಗಿನ ಸಂತ್ರಸ್ತರಿಗೆ ಮಿಡಿಯುವಂತೆ ಮಾಡುತ್ತಿದ್ದಾರೆ.
ಪುಟ್ಟ ಮಕ್ಕಳ ಈ ಕಾರ್ಯಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಕೊಡಗು ಮತ್ತು ಕೇರಳ ಸಂತ್ರಸ್ತರಿಗೆ ರಾಜಕಾರಣಿಗಳು, ಮಠಾಧೀಶರು ಮತ್ತು ಸಂಘ ಸಂಸ್ಥೆಗಳು ಸ್ಪಂದಿಸಿರೋದು ಹೊಸದಲ್ಲ. ಆದರೆ ಈ ಪುಟ್ಟ ಪೋರರು ತಮ್ಮಲ್ಲಿ ಅಡಗಿರುವ ನೃತ್ಯದ ಪ್ರತಿಭೆ ಮೂಲಕ ಕೊಡಗು ಮತ್ತು ಕೇರಳ ಸಂತ್ರಸ್ತರಿಗೆ ಮಿಡಿಯುತ್ತಿರೋದು ದೊಡ್ಡ ಕೆಲಸ ಎಂದು ಹೇಳಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv