ಹಾಸನ: ಪಿತೃಪಕ್ಷ ಹಬ್ಬದ ಬ್ಯುಸಿಯಲ್ಲಿದ್ದ ಅಕ್ಕನ ಚಿನ್ನದ ಸರವನ್ನೇ ತಮ್ಮ ಎಗರಿಸಿದ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ ಪಟ್ಟಣದ ಚಂಪಕನಗರ ಬಡಾವಣೆಯಲ್ಲಿ ನಡೆದಿದೆ.
ಮಾನಸ ಎಂಬ ಮಹಿಳೆ ಚಿನ್ನದ ಸರ ಕಳೆದುಕೊಂಡಿದ್ದವರು. ಹೆತ್ತೂರು ಗ್ರಾಮದ ಜೀವನ್ ಚಿನ್ನ ಕದ್ದಿದ್ದ ಮಾನಸ ತಮ್ಮ. ಕೊನೆಗೆ ಆರೋಪಿಯನ್ನು ಹಿಡಿದು ಚಿನ್ನದ ಸರವನ್ನು ಮರಳಿ ಮಹಿಳೆಗೆ ಪೊಲೀಸರು ನೀಡಿದ್ದಾರೆ.
ಘಟನೆ ಏನು?
ಪಿತೃಪಕ್ಷ ಹಬ್ಬದ ಊಟಕ್ಕೆ ಒಡಹುಟ್ಟಿದ ತಮ್ಮ ಜೀವನ್‌ನನ್ನು ಅಕ್ಕ ಮಾನಸ ಕರೆದಿದ್ದಳು. ಅಕ್ಕನ ಮನೆಗೆ ಸ್ನೇಹಿತ ಪ್ರಶಾಂತ್ ಜೊತೆಗೆ ಜೀವನ್ ಬಂದಿದ್ದ. ಮಾನಸ ಕುಟುಂಬ ಹಬ್ಬದ ಸಂಭ್ರಮದಲ್ಲಿತ್ತು. ಈ ವೇಳೆ ಮಾಸನ ಅವರ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ 16 ಗ್ರಾಂ ತೂಕದ 1,50,000 ರೂ. ಬೆಲೆಬಾಳುವ ಚಿನ್ನದ ಸರವನ್ನು ಜೀವನ್ ಮತ್ತು ಆತನ ಸ್ನೇಹಿತ ಪ್ರಶಾಂತ್ ಎಗರಿಸಿದ್ದರು. ನಂತರ ಬೆಂಗಳೂರಿನ ಸ್ನೇಹಿತ ಶಿವ ಎಂಬಾತನಿಗೆ ಚಿನ್ನದ ಸರ ಮಾರಾಟ ಮಾಡಿದ್ದರು. ಚಿನ್ನದ ಸರ ಮಾರಾಟ ಮಾಡಿದ ಹಣದಲ್ಲಿ ಮೋಜು-ಮಸ್ತಿ ಮಾಡಿದ್ದರು.
ಇತ್ತ ಚಿನ್ನದ ಸರ ಕಾಣದೇ ಇದ್ದಾಗ ಅನುಮಾನ ಮೂಡಿ ತಮ್ಮ ಮತ್ತು ಆತನ ಸ್ನೇಹಿತನ ವಿರುದ್ಧವೇ ಪೊಲೀಸ್ ಠಾಣೆಗೆ ಮಾನಸ ದೂರು ನೀಡಿದ್ದರು. ಇಬ್ಬರನ್ನೂ ಪೊಲೀಸರು ಫೋನ್ ಮೂಲಕ ವಿಚಾರಣೆ ನಡೆಸಿದ್ದರು. ಕೊನೆಗೆ ಚಿನ್ನದ ಸರ ಕಳ್ಳತನ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡರು.
ಬೆಂಗಳೂರಿನಿಂದ ಚಿನ್ನದ ಸರವನ್ನು ತಂದು ಇಬ್ಬರು ಕೂಡ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ನಡೆದ ಮೂರು ಗಂಟೆಯೊಳಗೆ ಪೊಲೀಸರಿಗೆ ಚಿನ್ನದ ಸರ ಸಿಕ್ಕಿದೆ. ಸರವನ್ನು ಮಾನಸಗೆ ಪೊಲೀಸರು ಒಪ್ಪಿಸಿದ್ದಾರೆ. ಆದರೆ, ಈ ಸಂಬಂಧ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಿಸಿಲ್ಲ.