Connect with us

Districts

ಅಕ್ಕನ ಆರೈಕೆಗಾಗಿ ಶಾಲೆ ಬಿಟ್ಟು ಕೂಲಿಗೆ ಸೇರಿದ ತಮ್ಮ

Published

on

-ಹೆತ್ತವರಿಲ್ಲದೇ ಸಹಾಯ ಹಸ್ತ ಬಯಸುತ್ತಿರುವ ಬಡ ಜೀವಗಳು

ಮೈಸೂರು: ಅಕ್ಕ-ತಮ್ಮ ಬಾಂಧವ್ಯ, ಅಣ್ಣ-ತಂಗಿಯ ಬಾಂಧವ್ಯ ಯಾವತ್ತೂ ಅಮರ. ಅಕ್ಕನಿಗಾಗಿ, ತಂಗಿಗಾಗಿ ಸಹೋದರ ಏನೂ ಬೇಕಾದರೂ ಮಾಡುತ್ತಾನೆ. ಯಾವ ತ್ಯಾಗಕ್ಕೂ ಬೇಕಾದರೂ ಸಿದ್ಧನಾಗುತ್ತಾನೆ. ಈ ಮಾತಿಗೆ ಸಾಕ್ಷಿ ಎನ್ನುವಂತಹ, ಮನ ಕಲುಕುವ ಸುದ್ದಿ ಇದಾಗಿದ್ದು, ತಂದೆ ತಾಯಿಯನ್ನು ಕಳೆದುಕೊಂಡ ಬಾಲಕ, ಪಾರ್ಶ್ವವಾಯು ರೋಗಕ್ಕೆ ಒಳಗಾದ ಅಕ್ಕನ ಆರೈಕೆಗಾಗಿ ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದಾನೆ.

ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಅಲನಹಳ್ಳಿ ಗ್ರಾಮದ ಮಂಜುಳಾ ಮತ್ತು ಕುಮಾರ್ ದಂಪತಿ ಪುತ್ರ ಆಕಾಶ್(15) ತನ್ನ ಅಕ್ಕ ಅನುಷಾ(17) ಆರೈಕೆಗಾಗಿ ಓದು ಬಿಟ್ಟು ಕೂಲಿಗೆ ಇಳಿದಿದ್ದಾನೆ. ಅನಾರೋಗ್ಯದಿಂದ ಇವರ ತಂದೆ ತಾಯಿ ಮೃತಪಟ್ಟಿದ್ದಾರೆ. ಗ್ರಾಮದ ಟಿ.ಎಸ್ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಆಕಾಶ್ 8ನೇ ತರಗತಿ ಓದುತ್ತಿದ್ದ. ಹೆತ್ತವರು ಮೃತಪಟ್ಟ ಕಾರಣ ರೋಗ ಪೀಡಿತ ಅಕ್ಕನ ನೋಡಿಕೊಳ್ಳಲು ಯಾರು ಇಲ್ಲದೆ, ಮನೆ ನಿರ್ವಹಣೆಗೆ ದಾರಿಯೂ ಇಲ್ಲದ ಕಾರಣ ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದಾನೆ.

ಅಕ್ಕನಿಗೆ ಕೈ ಕಾಲುಗಳು ಸ್ವಾಧೀನ ಇಲ್ಲ. ಆಕೆಯ ನಿತ್ಯ ಕರ್ಮ ಪೂರೈಸಲು, ಊಟ ಮಾಡಿಸಲು, ಬಟ್ಟೆ ಬದಲಿಸಲು ತಮ್ಮ ನೆರವಾಗುತ್ತಿದ್ದಾನೆ. ಅಕ್ಕನ ಕೆಲಸ ಮುಗಿಸಿ ಕೂಲಿಗೆ ಹೋಗುತ್ತಿದ್ದಾನೆ. ಸಂಜೆ ಮನೆಗೆ ಬಂದು ಅಡುಗೆ ಮಾಡಿ ಅಕ್ಕನಿಗೆ ಊಟ ಮಾಡಿಸುತ್ತಾನೆ. ಈ ಅನಾಥ ಅಕ್ಕ-ತಮ್ಮನಿಗೆ ಉಳ್ಳವರ ಸಹಾಯ ಬೇಕಿದೆ.

ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲ್ಲೂಕಿನ ಹಾಲಹಳ್ಳಿ ಆಕಾಶ್ ಮನೆಗೆ ತಹಸೀಲ್ದಾರ್ ಆರ್ ಮಂಜುನಾಥ್ ಭೇಟಿ ನೀಡಿದ್ದರು. ಅನುಷಾಳಿಗೆ ಮೆದುಳು ನಿಷ್ಕ್ರಿಯ ಕಾಯಿಲೆ(ಸೆಬರ್ ಪಾಲ್ಸಿ) ಎಂಬ ಕಾಯಿಲೆ ಇದ್ದು, ಆಕೆಗೆ ಯಾವುದೇ ಸ್ವಾಧೀನ ಇರುವುದಿಲ್ಲ ಹೀಗಾಗಿ ಆಕೆಯನ್ನು ಮೈಸೂರಿನ ಕರುಣಾಲಯ ಟ್ರಸ್ಟ್ ಗೆ ಸ್ಥಳಾಂತರಿಸಿ ಆಕೆಯ ಶುಶ್ರೂಷೆಯನ್ನು ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಇತ್ತ ಆಕಾಶ್‍ನನ್ನು ಮೈಸೂರಿನ ಬಾಲಮಂದಿರಕ್ಕೆ ಸೇರಿಸಿ ಶಿಕ್ಷಣ ಕೊಡಿಸಲಾಗುವುದು ಎಂದು ತಿಳಿಸಿದಾಗ, ಬಾಲಕ ಆಲನಹಳ್ಳಿಯ ಶಾಲೆಯಲ್ಲಿ ಓದುತ್ತೇನೆ ನನಗೆ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಿ ಎಂದು ಹೇಳಿದ್ದಾನೆ. ಆತನ ಇಚ್ಛೆಯಂತೆ ಕ್ಯಾತನಹಳ್ಳಿಯಲ್ಲಿ ಹಾಸ್ಟೆಲ್ ಇದ್ದು ಆತನನ್ನು ಅಲ್ಲಿಗೇ ಸೇರಿಸಿ ಶಿಕ್ಷಣ ಮುಂದುವರಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *