ಬೆಂಗಳೂರು: ಮನೆ ಆಸೆಗಾಗಿ ನಾದಿನಿಯನ್ನೇ ಕೊಲೆ ಮಾಡಿದ್ದ ಆರೋಪಿ ಸೇರಿದಂತೆ ಆತನಿಗೆ ಸಹಕರಿಸಿದ್ದ ಮತ್ತೊಬ್ಬನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ವಿವೇಕ್ ಅಗರ್ವಾಲ್ ಮತ್ತು ಕೊಲೆಗೆ ಸಹಕರಿಸಿದ್ದ ಥಾಯ್ ಹೇಲ್ ಬಂಧಿತ ಆರೋಪಿಗಳು. ಇದೇ ತಿಂಗಳು 15ರಂದು ವಿವೇಕ್, ಥಾಯ್ ಹೇಲ್ ಜೊತೆ ಸೇರಿಕೊಂಡು ತನ್ನ ನಾದಿನಿ ಅನುಶಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದನು. ಈಗ ಕೆಂಗೇರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ತಿಗಾಗಿ ಭಾವನಿಂದ್ಲೇ ಕೊಲೆಯಾದ್ಳಾ ನಾದಿನಿ..?
ವಿವೇಕ್, ಶೇರು ಮಾರ್ಕೆಟ್ ನಲ್ಲಿ ಹಣ ಹೂಡಿದ್ದ. ಆದರೆ ಅದರಲ್ಲಿ ಆತನಿಗೆ ನಷ್ಟ ಉಂಟಾಗಿತ್ತು. ಹಾಗಾಗಿ ಆತ ತನ್ನ ನಾದಿನಿ ಅನುಶಾ ಬಳಿ ಹಣ ಮತ್ತು ಬಿಡದಿ ಬಳಿ ಇರುವ ಮನೆ ನೀಡುವಂತೆ ಪೀಡಿಸುತ್ತಿದ್ದನು. ಆದರೆ ಅನುಶಾ ಇದಕ್ಕೆ ನಿರಾಕರಿಸಿದ್ದಾಳೆ. ಹೀಗಾಗಿ ಸಿಟ್ಟಿಗೆದ್ದಿದ್ದ ವಿವೇಕ್, ಥಾಯ್ ಹೇಲ್ ಎನ್ನುವವನ ಸಹಾಯ ಪಡೆದು ಕೊಲೆ ಮಾಡಿದ್ದಾನೆ.
ನಡೆದಿದ್ದೇನು?
ಅನುಶಾ 1 ವರ್ಷದ ಹಿಂದೆ ಸನತ್‍ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕೆಂಗೇರಿಯ ಸನ್ ಸಿಟಿ ಬಳಿ ಮನೆಯೊಂದರಲ್ಲಿ ದಂಪತಿ ವಾಸವಾಗಿದ್ದರು. ಆದರೆ ಫೆ. 18ರಂದು ಇದ್ದಕ್ಕಿದ್ದಂತೆ ಪತ್ನಿ ಅನುಶಾ ಮನೆಯಲ್ಲಿ ಶವವಾಗಿ ಬಿದ್ದಿದ್ದಳು. ಬಿಹೆಚ್‍ಇಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಅನುಶಾ ಫೆ. 18ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದಳು. ಅದಾದ ಬಳಿಕ ಆಕೆ ಯಾರ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಆಫೀಸ್‍ನಲ್ಲಿ ಕೆಲಸ ಇರಬಹುದು ಎಂದು ಸುಮ್ಮನಾಗಿದ್ದ ಪೋಷಕರು, ನಂತರ ಅನುಮಾನ ಬಂದು ಮತ್ತೆ ಮತ್ತೆ ಕರೆ ಮಾಡಿದಾಗ ಯಾವುದೇ ಪ್ರತ್ಯುತ್ತರ ಇರಲಿಲ್ಲ. ಹೀಗಾಗಿ ಪೋಷಕರು ಪತಿಗೆ ವಿಚಾರ ತಿಳಿಸಿದ್ದರು. ಕೂಡಲೇ ಸನತ್ ಮನೆಗೆ ಹೋಗಿ ಬೀಗ ಮುರಿದು ನೋಡಿದಾಗ ನೆಲದಲ್ಲಿ ಅನುಶಾ ಶವವಾಗಿ ಬಿದ್ದಿದ್ದಳು. ಇದರಿಂದ ಗಾಬರಿಗೊಂಡ ಸನತ್, ಅನುಶಾ ಪೋಷಕರಿಗೆ ವಿಷಯ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv