ಬೆಂಗಳೂರು: ಸಂಪುಟ ರಚನೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಒಂದೊಂದೇ ಸವಾಲು ಎದುರಾಗುತ್ತಿದ್ದು, ಸಚಿವ ಸ್ಥಾನ ವಂಚಿತರೆಲ್ಲರೂ ತಮ್ಮ ಬೃಹತ್ ಬೇಡಿಕೆಗಳನ್ನು ಸಿಎಂಗೆ ಸಲ್ಲಿಸುತ್ತಿದ್ದಾರೆ. ಇದರ ಭಾಗವಾಗಿ ಬಂಡಾಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಹ ಬೇಡಿಕೆಯನ್ನು ಸಿಎಂ ಮುಂದಿಟ್ಟಿದ್ದಾರೆ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನದಿಂದ ವಂಚಿತರಾದ ಹಿನ್ನೆಲೆಯಲ್ಲಿ ತೀವ್ರ ಬೇಸರವಾಗಿದ್ದು, ಇದೀಗ ಸಿಎಂ ಬಳಿ ಒಂದೊಂದೇ ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ. ಈಗಾಗಲೇ ಮುನಿಸಿಕೊಂಡಿರುವ ಬಾಲಚಂದ್ರ ಜಾರಕಿಹೊಳಿ, ತಮಗೆ ಸಚಿವ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಅಣ್ಣ ರಮೇಶ್ ಜಾರಕಿಹೊಳಿಗೆ ದೊಡ್ಡ ಹುದ್ದೆ ಮತ್ತು ಪ್ರಭಾವಿ ಖಾತೆ ಕಾಯ್ದಿರಿಸುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.
Advertisement
Advertisement
ಸಿಎಂ ಭೇಟಿ ಮಾಡಿರುವ ಅವರು ದೊಡ್ಡ ಬೇಡಿಕೆಯನ್ನೇ ಸಲ್ಲಿಸಿದ್ದು, ಸರ್ಕಾರ ರಚನೆಗೆ ಅಣ್ಣನೇ ಕಾರಣವಾಗಿದ್ದು ಹಾಗಾಗಿ ಮುಂದಿನ ಸಚಿವ ಸಂಪುಟ ವಿಸ್ತರಣೆಯವರೆಗೂ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಜಲಸಂಪನ್ಮೂಲ ಖಾತೆಯನ್ನು ಯಾರಿಗೂ ಕೊಡಬೇಡಿ. ಈ ಎರಡು ಸ್ಥಾನಗಳನ್ನು ಕಾಯ್ದಿರಿಸಿ. ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ, ಇಲ್ಲವೇ ಜಲಸಂಪನ್ಮೂಲ ಖಾತೆಯನ್ನು ನೀಡಿ. ಈ ಎರಡೂ ಸ್ಥಾನಗಳನ್ನು ಹಾಲಿ ಯಾವ ಸಚಿವರಿಗೆ ಹಂಚಬೇಡಿ ಎಂದು ಸಿಎಂ ಯಡಿಯೂರಪ್ಪ ಎದುರು ಬಾಲಚಂದ್ರ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಆದರೆ, ಬಾಲಚಂದ್ರ ಜಾರಕಿಹೊಳಿ ಅವರ ಪಟ್ಟಿಗೆ ಸಿಎಂ ಒಪ್ಪುತ್ತಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ.