ಚಿಕ್ಕಮಗಳೂರು: ನೀರಿನ ಟ್ಯಾಂಕರ್ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಅತ್ತಿಗೆ ಮತ್ತು ಮೈದುನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಳೆ ಲಕ್ಯಾ ಗ್ರಾಮದಲ್ಲಿ ನಡೆದಿದೆ.
ಲತಾಮಣಿ (25) ಮತ್ತು ಮನೋಜ್ (19) ಮೃತ ಅತ್ತಿಗೆ-ಮೈದುನ. ಇನ್ನೂ ಬೈಕಿನಲ್ಲಿದ್ದ ಮಗುವಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಲತಾಮಣಿ ಪೊಲೀಸ್ ಪತ್ನಿಯಾಗಿದ್ದು, ಕಡೂರಿನ ಎಸ್. ಬಿದರೆ ಗ್ರಾಮದವರು ಎಂದು ತಿಳಿದು ಬಂದಿದೆ.
ಬೈಕಿನಲ್ಲಿ ಅತ್ತಿಗೆ-ಮೈದುನ ಮತ್ತು ಮೃತ ಲತಾಮಣಿ ಮಗು ಮೂವರು ಎಸ್.ಬಿದರೆಯಿಂದ ಚಿಕ್ಕಮಗಳೂರಿಗೆ ಬರುತ್ತಿದ್ದರು. ಈ ವೇಳೆ ಬರುವಾಗ ಹಳೆ ಲಕ್ಯಾ ಗ್ರಾಮದಲ್ಲಿ ಬಳಿ ಇವರ ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ನೀರಿನ ಟ್ಯಾಂಕರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಅತ್ತಿಗೆ-ಮೈದುನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗಾಯಗೊಂಡಿದ್ದ ಮಗುವನ್ನು ಟ್ಯಾಂಕರ್ ಚಾಲಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾನೆ. ಲಕ್ಯಾ ಗ್ರಾಮದ ಪಾಂಡು ಎಂಬವರಿಗೆ ಸೇರಿದ ಟ್ಯಾಂಕರ್ ಲಾರಿ ಇದಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.