– 100 ರೂ. ಜಾಗದಲ್ಲಿ 6 ಸಾವಿರ ಕೊಡಬೇಕು
– ಸೌದೆ ಬೇಡ ಅಂದ್ರೆ ರೋಡಲ್ಲಿ ಸುಡಬೇಕು!
ಬೆಂಗಳೂರು: ಸ್ಮಶಾನಗಳನ್ನು ಚಿರಶಾಂತಿ ಸ್ಥಳ ಎನ್ನುತ್ತಾರೆ. ಇಂತಹ ಜಾಗಗಳಲ್ಲೂ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಸ್ಮಶಾನದಲ್ಲಿ ಹೆಣ ಸುಡಬೇಕು ಅಂದರೆ ಸೌದೆಗೆ ಆರು ಸಾವಿರ ರೂ. ಕೊಡಬೇಕು.
ಹೌದು. ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಚಿತಾಗಾರದಲ್ಲಿ ಈಗಲೂ ಸೌದೆ ಬಳಸಿ ಹೆಣಗಳನ್ನು ಸುಡಲಾಗುತ್ತದೆ. ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ತಿರ್ಮಾನಿಸಲಾಗಿದೆ. ಸದ್ಯ ಸೌದೆಗಳ ಮೂಲಕವೇ ಹೆಣ ಸುಡಲಾಗುತ್ತಿದೆ. ಈ ಸ್ಮಶಾನದಲ್ಲಿ ಹೆಣ ಸುಡಬೇಕಾದರೆ ಸೌದೆಗಾಗಿ 6 ಸಾವಿರ ರೂ. ಕೊಡಬೇಕು.
ಸೌದೆ ತೆಗೆದುಕೊಂಡರೆ ಮಾತ್ರ ಮೃತದೇಹ ಸುಡಲು ಸ್ಲಾಟ್ ಕೊಡುತ್ತಾರೆ. ಸೌದೆ ಬ್ರೋಕರ್‌ಗಳ ಕಾರುಬಾರು ವಿಪರೀತ ಹೆಚ್ಚಾಗಿದ್ದು ಇರುವ ಸ್ಲಾಟ್‌ಗಳನ್ನು ಮೂವರು ಸೌದೆ ಮಂಡಿಯವರು ಹಂಚಿಕೊಂಡಿದ್ದಾರೆ. ಇವರ ಬಳಿಸೌದೆ ಖರೀದಿಸಿದರೆ ಮಾತ್ರ ಜನರಿಗೆ ಸ್ಲಾಟ್ ಸಿಗುತ್ತದೆ. ಸೌದೆ ಬೇಡ ಅಂದರೆ ಇಲ್ಲಿ ಸುಡಲು ಅವಕಾಶವಿಲ್ಲ. ಬ್ರೋಕರ್‌ಗಳೇ ಈ ಶಾಕಿಂಗ್ ವಿಚಾರವನ್ನು ತಿಳಿಸಿದ್ದು, ಸೌದೆ ಬೇಡ ಅಂದರೆ ನೆಲದ ಮೇಲೆ ಸುಡಿ, ಇಲ್ಲದೇ ಇದ್ರೆ ರೋಡಲ್ಲಿ ಸುಡಿ ಎನ್ನುತ್ತಾರೆ. ಮಂಡಿಯವರ ಹಾವಳಿ ಪಬ್ಲಿಕ್ ಟಿವಿಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!
ಪಬ್ಲಿಕ್ ಟಿವಿ ಪ್ರತಿನಿಧಿ ಮತ್ತು ಸೌದೆ ಮಂಡಿಯವರ ನಡುವಿನ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ.
ಪ್ರತಿನಿಧಿ- ಟೆಂಡರ್ ತಗೊಂಡಿದ್ದೀರಾ?
ಸೌದೆ ಮಂಡಿಯವರು- ಇಲ್ಲ..ನಾವು ಮೂರು ಮಂಡಿಯವರು ಕಟ್ಟಿಗೆ ಹಾಕ್ತೀವಿ.
ಪ್ರತಿನಿಧಿ- ಎಷ್ಟಾಗುತ್ತೆ?
ಸೌದೆ ಮಂಡಿಯವರು- 5,600+300 ಆಗುತ್ತೆ
ಪ್ರತಿನಿಧಿ- ಸೌದೆ ಬಿಟ್ಟು ಬಾಕ್ಸ್ ಬುಕ್ ಮಾಡೋಕ್ ಆಗಲ್ವಾ?
ಸೌದೆ ಮಂಡಿಯವರು- ಸೌದೆ ನೀವು ತರೋಹಂಗಿಲ್ಲ?
ಪ್ರತಿನಿಧಿ- ಬಿಬಿಎಂಪಿ ಚಾರ್ಜ್ ಇರುತ್ತಾ?
ಸೌದೆ ಮಂಡಿಯವರು- 300 ಬರೆದು ಕೋಡೋಕೆ.
ಪ್ರತಿನಿಧಿ- 6 ಸಾವಿರ ಜಾಸ್ತಿ ಅಲ್ವಾ.
ಸೌದೆ ಮಂಡಿಯವರು- ಹಾಗಾದ್ರೇ ಅಲ್ಲೆ ಎಲ್ಲಾದ್ರೂ ಊರು ಕಡೆ ಮಾಡ್ಕೊಳ್ರಿ.
ಪ್ರತಿನಿಧಿ- ಊರಿಂದ ಜನ ಸೌದೆ ತರ್ತಾರೆ.
ಸೌದೆ ಮಂಡಿಯವರು- ಸೌದೆ ತಂದ್ರೇ ರೋಡಲ್ಲಿ ಇಟ್ಕೊಂಡ್ ಮಾಡಿ.
ಪ್ರತಿನಿಧಿ- ಬಿಬಿಎಂಪಿದಲ್ವಾ ಒಂದೆರಡು ಸಾವಿರದಲ್ಲಿ ಆಗಲ್ವಾ?
ಸೌದೆ ಮಂಡಿಯವರು- ಸೌದೆ ತರ್ತೀವಿ ಜಾಗ ಕೊಡಿ ಅಂದ್ರೇ ಯಾವೋನ್ ಕೊಡ್ತಾನೆ. ಇದನ್ನೂ ಓದಿ: Exclusive | ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್ – ಮಾಸ್ಟರ್‌ಸ್ಟ್ರೋಕ್ ಕೊಡ್ತಾರಾ ಸಿಎಂ?
ಪ್ರತಿನಿಧಿ- ಸೌದೆ ಇಲ್ಲದೆ ಬುಕ್ ಮಾಡ್ಕೊಳ್ಳಲ್ವಾ?
ಸೌದೆ ಮಂಡಿಯವರು- ಊರಿಂದ ಸೌದೆ ತಂದ್ರೇ ಬಾಕ್ಸ್ ಕೊಡಲ್ಲ. ನೆಲದಲ್ಲೇ ಮಾಡ್ಕೋಬೇಕು.
ಸೌದೆ ಮಂಡಿಯವರು- ಸಾವಿನ ಮನೆಯವರು ದುಡ್ಡಿನ ಬಗ್ಗೆ ಇಷ್ಟೋಂದು ಯೋಚನೆ ಮಾಡಲ್ಲ.
ಪ್ರತಿನಿಧಿ- ಟೆಂಡರ್ ಹಾ ಇದು. ಬಿಬಿಎಂಪಿ ದಾ ಇದು.
ಸೌದೆ ಮಂಡಿಯವರು- ಸ್ಲಾಟ್ ಬುಕ್ಕಿಂಗ್ ಬಿಬಿಎಂಪಿಯದ್ದು. ಸೌದೆ ಮಂಡಿಯವರದ್ದು.
ಪ್ರತಿನಿಧಿ- ಬಿಬಿಸಂಪಿಯಿಂದ ದುಡ್ಡಿರಲ್ಲ ಹಾಗಿದ್ರೆ.
ಸೌದೆ ಮಂಡಿಯವರು- ಬಿಬಿಎಂಪಿಯಿಂದ ಒಂದು ರೂಪಾಯಿ ಸಹ ಇರಲ್ಲ.
ಸೌದೆ ಮಂಡಿಯವರು- ಬುಕ್ಕಿಂಗ್ ಮಾಡಿದ್ರಷ್ಟೇ ಸ್ಲಾಟ್ ಸಿಗೋದು.
ಪ್ರತಿನಿಧಿ- ಡಿಪೋದವರು ಕಡಿಮೆಗೆ ಹೇಳಿದ್ರು.
ಸೌದೆ ಮಂಡಿಯವರು- ಹಾಗಾದ್ರೇ ಅಲ್ಲೆ ಮಾಡ್ಕೊಳ್ಳಿ.
ಬಿಬಿಎಂಪಿ ಶುಲ್ಕ 100- 300 ರೂ. ಇದ್ದರೆ ಸೌದೆ ಅಂತ ಇವರು 6 ಸಾವಿರ ರೂ. ಪಡೆಯುತ್ತಾರೆ. ಈಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಬಡ ಜನರ ಮೇಲೆ ಹೊರೆಯಾಗದಂತೆ ನೋಡಿಕೊಳ್ಳಬೇಕಿದೆ.