ಅವಳು ನನಗೆ ಕೈಕೊಟ್ಟಳು.. ಅಮ್ಮ ನಿನ್ನ ಪ್ರೀತಿ ಸಾಗರ, ನನ್ನನ್ನೇಕೆ ಬಿಟ್ಟು ಹೋದೆ.. ನನ್ನ ಮುದ್ದಿನ ಟೋನಿ (ಸಾಕು ನಾಯಿ) ಇನ್ನಿಲ್ಲ.. ಹೀಗೆ ಪ್ರೀತಿ ಪಾತ್ರರನ್ನು ಕಳೆದುಕೊಂಡು ಕೊರಗುವವರು ಎಷ್ಟು ಮಂದಿ. ಪ್ರೀತಿ-ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು. ಇದು ಹೃದಯಕ್ಕೆ ಸಂಬಂಧಿಸಿದ ಮಾತು. ಮನುಷ್ಯನಿಗೆ ಹೃದಯ ಎಷ್ಟು ಮುಖ್ಯ ಅಲ್ವಾ? ಅದು ಸದಾ ಲಬ್ ಡಬ್.. ಲಬ್ ಡಬ್ ಎನ್ನಲು ದೇಹಕ್ಕೆ ಆರೋಗ್ಯ ಮತ್ತು ಮನಸ್ಸಿಗೆ ಉಲ್ಲಾಸ ಬೇಕು. ಇವರೆಡೂ ಇಲ್ಲ ಅಂದ್ರೆ ಹೃದಯದ ಕಥೆ ಏನಾಗಬಹುದು?
ಹೃದಯ ಮುರಿದೀತು ಜೋಕೆ! ಹೀಗೆನ್ನುತ್ತಿದ್ದಾರೆ ಆರೋಗ್ಯ ತಜ್ಞರು. ಪ್ರೀತಿ ವಿಷಯದಲ್ಲಿ ಹೆಚ್ಚು ಭಾವನೆಗೆ ಒಳಗಾಗಬೇಡಿ. ಅದು ನಿಮ್ಮ ಪ್ರಾಣಕ್ಕೆ ಅಪಾಯ ತರಬಹುದು. ‘ಬ್ರೋಕನ್ ಹಾರ್ಟ್ ಸಿಂಡ್ರೋಮ್’. ಇದು ಹೃದಯವಂತರಿಗೆ ಎಚ್ಚರಿಕೆಯ ಕರೆಗಂಟೆ. ಈ ಸಿಂಡ್ರೋಮ್‌ಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬಲಿಯಾಗುತ್ತಿದ್ದಾರಂತೆ. ಹೀಗಾಗಿ, ಹೃದಯಕ್ಕೆ ಹೆಚ್ಚು ನೋವು ಕೊಡಬೇಡಿ ಎನ್ನುತ್ತಿದ್ದಾರೆ ವೈದ್ಯರು.
ಬ್ರೋಕನ್ ಹಾರ್ಟ್ ಸಿಂಡ್ರೋಮ್‌ಗೆ ವೈದ್ಯಕೀಯ ಪರಿಭಾಷೆಯಲ್ಲಿ ‘ಟಕೋಟ್ಸುಬೊ ಕಾರ್ಡಿಯೊಮಯೋಪತಿ’ ಎಂದು ಕರೆಯುತ್ತಾರೆ. ಪ್ರೀತಿಪಾತ್ರರನ್ನು ಕಳೆದುಕೊಳ್ಳುವ, ಗಂಭೀರ ಅನಾರೋಗ್ಯ ಅಥವಾ ಶಸ್ತ್ರಚಿಕಿತ್ಸೆಯಿಂದಾಗಿ ತೀವ್ರವಾದ ಭಾವನಾತ್ಮಕ ಅಥವಾ ದೈಹಿಕ ಒತ್ತಡಕ್ಕೆ ಒಳಗಾಗುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸಿಂಡ್ರೋಮ್ ಕೂಡ ಹೃದಯಘಾತದಂತೆಯೇ ಎದೆ ನೋವು, ಉಸಿರಾಟದ ತೊಂದರೆ ಮತ್ತು ಜೋರಾದ ಹೃದಯ ಬಡಿತವನ್ನು ಉಂಟುಮಾಡುತ್ತದೆ. ಆದರೆ ಸಾಮಾನ್ಯ ಹೃದಯಾಘಾತದಂತೆ ಇದು ನಿರ್ಬಂಧಿತ ಅಪಧಮನಿಗಳನ್ನು ಒಳಗೊಂಡಿರುವುದಿಲ್ಲ.
ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ವರದಿಯು 2016 ಮತ್ತು 2020 ರ ನಡುವೆ ಆಸ್ಪತ್ರೆಗೆ ದಾಖಲಾದ ಸುಮಾರು 2,00,000 ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ.
ಸಂಶೋಧಕರು ಕಂಡುಕೊಂಡಿದ್ದೇನು?
ಆಸ್ಪತ್ರೆಯಲ್ಲಿ ಒಟ್ಟಾರೆ ಮರಣ ಪ್ರಮಾಣ: 6.5%
ಮಹಿಳೆಯರ ಮರಣ ಪ್ರಮಾಣ: 5.5%
ಪುರುಷರ ಮರಣ ಪ್ರಮಾಣ: 11.2%
ಈ ವರದಿಯನ್ನು ಗಮನಿಸಿದರೆ ಪುರುಷರಲ್ಲಿ ಹೆಚ್ಚಿನ ಮರಣ ಪ್ರಮಾಣ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಉತ್ತಮ ಚಿಕಿತ್ಸೆಗಳು ಮತ್ತು ಹೆಚ್ಚಿನ ಸಂಶೋಧನೆಯ ತುರ್ತು ಅಗತ್ಯವಿದೆ ಎಂದು ಅರಿಜೋನಾ ವಿಶ್ವವಿದ್ಯಾನಿಲಯದ ಹೃದ್ರೋಗ ತಜ್ಞ ಡಾ. ಮೊಹಮ್ಮದ್ ರೆಜಾ ಮೊವಾಹೆದ್ ತಿಳಿಸಿದ್ದಾರೆ.
ಸಿಂಡ್ರೋಮ್‌ಗೆ ಅಪಾಯ ಏನು?
ಬ್ರೋಕನ್ ಹಾರ್ಟ್ ಸಿಂಡ್ರೋಮ್‌ಗೆ ಒಳಗಾಗುವವರಿಗೆ ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ ಈ ಸ್ಥಿತಿಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಹೃದಯ ವೈಫಲ್ಯ – 35.9%
ಅನಿಯಮಿತ ಹೃದಯ ಬಡಿತ (ಹೃತ್ಕರ್ಣದ ಕಂಪನ) – 20.7%
ಹೃದಯ ಆಘಾತ – 6.6%
ಪಾರ್ಶ್ವವಾಯು – 5.3%
ಹೃದಯ ಸ್ತಂಭನ – 3.4% ಕಾಣಿಸಿಕೊಳ್ಳಬಹುದು.
ಯಾರಿಗೆ ಹೆಚ್ಚು ಅಪಾಯವಿದೆ?
61 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. 46–60 ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 3.25 ಕ್ಕಿಂತ ಹೆಚ್ಚು ಪಟ್ಟು ಪರಿಣಾಮ ಬೀರುತ್ತಾರೆ. ಶ್ವೇತ ವರ್ಣೀಯರು ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಾರೆ (0.16%). ನಂತರ ಸ್ಥಳೀಯ ಅಮೆರಿಕನ್ನರು (0.13%) ಮತ್ತು ಕಪ್ಪು ವಯಸ್ಕರು (0.07%) ಸಮಸ್ಯೆಯಿಂದ ಬಳಲುತ್ತಾರೆ.
ಪುರುಷರೇ ಹೆಚ್ಚು ಸಾಯೋದು ಏಕೆ?
ಈ ಸಿಂಡ್ರೋಮ್‌ಗೆ ಶೇ.83% ರಷ್ಟು ಮಹಿಳೆಯರು ತುತ್ತಾಗುತ್ತಿದ್ದಾರೆ. ಆದರೆ, ಸಾವಿನ ಪ್ರಮಾಣದಲ್ಲಿ ಪುರುಷರೇ ಹೆಚ್ಚಿದ್ದಾರೆ. ಏಕೆಂದರೆ, ಪುರುಷರು ದೈಹಿಕ ಒತ್ತಡಗಳನ್ನು (ಶಸ್ತ್ರಚಿಕಿತ್ಸೆ ಅಥವಾ ಅನಾರೋಗ್ಯದಂತಹ) ಎದುರಿಸುವ ಸಾಧ್ಯತೆ ಹೆಚ್ಚು. ಪುರುಷರಿಗೆ ಸಾಮಾಜಿಕ ಬೆಂಬಲದ ಕೊರತೆಯೂ ಇರಬಹುದು. ಸಾಮಾಜಿಕ ಬೆಂಬಲವು ಗುಣಪಡಿಸುವಿಕೆಗೆ ನಿರ್ಣಾಯಕವಾಗಿದೆ. ಆ ಬೆಂಬಲವಿಲ್ಲದೆ, ಚೇತರಿಕೆ ನಿಧಾನ ಮತ್ತು ಹೆಚ್ಚು ಅಪಾಯಕಾರಿಯಾಗಬಹುದು. ಮಹಿಳೆಯರು ಹೆಚ್ಚಾಗಿ ಭಾವನಾತ್ಮಕ ಒತ್ತಡಗಳನ್ನು (ದುಃಖ ಅಥವಾ ಉದ್ಯೋಗ ನಷ್ಟ) ಎದುರಿಸುತ್ತಾರೆ.
5 ವರ್ಷಗಳಲ್ಲಿ ಯಾವುದೇ ಪ್ರಗತಿ ಇಲ್ಲ
ಐದು ವರ್ಷಗಳ ಅಧ್ಯಯನ ಅವಧಿಯಲ್ಲಿ ಮರಣ ಪ್ರಮಾಣವು ಸುಧಾರಿಸಲಿಲ್ಲ. ಈ ಸಿಂಡ್ರೋಮ್‌ಗೆ ಸದ್ಯದ ಚಿಕಿತ್ಸೆಗಳು ಪರಿಣಾಮಕಾರಿಯಾಗಿಲ್ಲ. ಆಸ್ಪತ್ರೆ ಸಂಪನ್ಮೂಲಗಳು, ಆದಾಯ ಮಟ್ಟ ಮತ್ತು ವಿಮಾ ಸ್ಥಿತಿಯಂತಹ ಅಂಶಗಳು ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನವು ತಿಳಿಸಿದೆ.