ಬೆಂಗಳೂರು: ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್ (Elizabeth II) ನಿಧನರಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಸೆಪ್ಟೆಂಬರ್ 11 ರಂದು ಕರ್ನಾಟಕದಲ್ಲೂ ಶೋಕಾಚರಣೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಸೆ.11 ರಂದು ಶೋಕಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮ ಇರುವುದಿಲ್ಲ. ನಿಯಮಿತವಾಗಿ ಎಲ್ಲಾ ಸರ್ಕಾರಿ ಇಲಾಖೆಯ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: 3ನೇ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕೃತ ಘೋಷಣೆ
ಕಳೆದ ವರ್ಷ ಅಕ್ಟೋಬರ್ ತಿಂಗಳಿನಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ (Britain Queen) ಎಲಿಜಬೆತ್ (96) ಅನಾರೋಗ್ಯದಿಂದ ಸೆ.8ರಂದು ಸ್ಕಾಟ್ಲೆಂಡ್ ಅರಮನೆಯಲ್ಲಿ ನಿಧನರಾದರು. ಇವರು 1923ರಿಂದ ಬ್ರಿಟನ್‌ನ ರಾಣಿಯಾಗಿದ್ದರು. ಇದನ್ನೂ ಓದಿ: ಲಂಕಾ ಆರ್ಥಿಕ ಬಿಕ್ಕಟ್ಟು – ಶಾಲೆಗಳ ಪಠ್ಯಪುಸ್ತಕ ಮುದ್ರಣಕ್ಕೆ ಭಾರತದಿಂದ ಭಾರೀ ನೆರವು
ರಾಣಿ 2ನೇ ಎಲಿಜಬೆತ್ ಸುದೀರ್ಘ 70 ವರ್ಷಗಳ ಆಳ್ವಿಕೆಯನ್ನು ಪೂರೈಸಿ ನಿಧನ ಹೊಂದಿದ ಬಳಿಕ ಇದೀಗ ಎಲಿಜಬೆತ್ ಅವರ ಹಿರಿಯ ಪುತ್ರ 3ನೇ ಚಾರ್ಲ್ಸ್ (Charles III) ಅವರನ್ನು ಅಧಿಕೃತವಾಗಿ ಬ್ರಿಟನ್ ರಾಜ ಎಂದು ಘೋಷಿಸಲಾಗಿದೆ. ಇಂದು ಅವರು ಪೀಠ ಅಲಂಕರಿಸಿದ್ದಾರೆ.