ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಸೇತುವೆಯೊಂದು ಕೊಚ್ಚಿಹೋಗಿದೆ.
ಇಲ್ಲಿನ ಸಿಂಗಾಪುರ ನಂದಿಹಾಳ ಮಾರ್ಗ ಮಧ್ಯದಲ್ಲಿನ ಸೇತುವೆ ಕೊಚ್ಚಿಹೋಗಿದ್ದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸುಮಾರು 20 ವರ್ಷಗಳಿಂದಲೂ ಶಿಥಿಲಾವಸ್ಥೆಯಲ್ಲಿದ್ದ ಸೇತುವೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಕುಸಿದು ಕೊಚ್ಚಿಹೋಗಿದೆ.
Advertisement
ರಾಯಚೂರು ಕೊಪ್ಪಳ ಜಿಲ್ಲೆ ಗಡಿಭಾಗದ ಈ ಸೇತುವೆ ಪುನರ್ನಿಮಾಣಕ್ಕೆ ಗ್ರಾಮಸ್ಥರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ನೀರು ಕಡಿಮೆಯಾಗಿದ್ದು ರಸ್ತೆಯಿಂದ 15 ಅಡಿ ಆಳದ ಹಳ್ಳದಲ್ಲೇ ಜನ ನಡೆದುಕೊಂಡು ಹೋಗುತ್ತಿದ್ದಾರೆ.
Advertisement
ಸೇತುವೆ ಜೊತೆಯಿದ್ದ ನೀರಿನ ಪೈಪ್ ಹಿಡಿದು ಯುವಕರು ಹಳ್ಳ ದಾಟುವ ಪ್ರಯತ್ನ ಮಾಡುತ್ತಿದ್ದಾರೆ. ಭಾರಿ ಪ್ರಮಾಣದಲ್ಲಿ ಬಂದ ಮಳೆ ನೀರು ಹೊಲ ಗದ್ದೆಗೆ ನುಗ್ಗಿದ ಪರಿಣಾಮ ಭತ್ತ, ಮೆಕ್ಕೆಜೋಳ ಬೆಳೆ ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ.