ರಾಯಚೂರು: ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವ ಹಾಗೇ ನೆರೆ ಹಾವಳಿ ಬಂದು ಎರಡು ತಿಂಗಳಾದ್ರೂ ರಾಯಚೂರಿನ ನೆರೆ ಸಂತ್ರಸ್ತರ ಯಾವುದೇ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಲ್ಲ. ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋದ ಸೇತುವೆಗಳನ್ನೇ ಗ್ರಾಮಸ್ಥರು ನಂಬಿದ್ದಾರೆ.
ರಾಯಚೂರಿನ ಲಿಂಗಸುಗೂರು ತಾಲೂಕಿನ ಜನರು ಕಷ್ಟಪಟ್ಟು ಅಳಿದುಳಿದ ಸೇತುವೆ ಮೇಲೆ ಸರ್ಕಸ್ ಮಾಡಿಕೊಂಡು ನದಿ ದಾಟುತ್ತಿದ್ದಾರೆ. ಇಲ್ಲಿನ ಶೀಲಹಳ್ಳಿ ಸೇತುವೆ ಕೃಷ್ಣಾ ನದಿ ಪ್ರವಾಹದ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರಿಂದ ಐದಾರು ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
Advertisement
Advertisement
ಜಖಂಗೊಂಡಿರುವ ಸೇತುವೆಯ ಮೇಲೆ ಎಲ್ಲಿ ಬಿದ್ದು ಹೋಗುತ್ತೆವೋ ಎನ್ನುವ ಭಯದಲ್ಲಿಯೇ ಜನ ನಡೆದುಕೊಂಡು ಹೋಗುತ್ತಿದ್ದಾರೆ. ಈ ಭಯದಲ್ಲಿಯೇ ವಿದ್ಯಾರ್ಥಿಗಳು ನದಿ ದಾಟಿ ತಮ್ಮ ಪರೀಕ್ಷೆಗಳನ್ನು ಬರೆದಿದ್ದಾರೆ. ಇಂತಹ ಪರಸ್ಥಿತಿಯಿದ್ದರು ಕನಿಷ್ಟ ತಾತ್ಕಾಲಿಕ ದುರಸ್ತಿಯನ್ನೂ ಮಾಡಿಲ್ಲ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೂ ಯಾವ ರಿಪೇರಿ ಕೆಲಸ ನಡೆಯದಿರುವುದಕ್ಕೆ ಜನ ಆಕ್ರೋಶಗೊಂಡಿದ್ದಾರೆ.
Advertisement
Advertisement
ನಾರಾಯಣಪುರ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ನದಿಗೆ ಹರಿಸಿದಾಗಲೆಲ್ಲಾ ಶೀಲಹಳ್ಳಿ ಸೇತುವೆ ಮುಳುಗಡೆಯಾಗುತ್ತಿತ್ತು. ಆದರೆ ಈ ಬಾರಿ ಜಲಾಶಯದಿಂದ 6 ಲಕ್ಷ 17 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇದರಿಂದ ಇಲ್ಲಿನ ಗ್ರಾಮಸ್ಥರು ಲಿಂಗಸುಗೂರಿಗೆ ಹೋಗಲು ಸುತ್ತುವರೆದು ಸುಮಾರು 25 ಕಿ.ಮೀಗೂ ಅಧಿಕ ದೂರ ಪ್ರಯಾಣಿಸಬೇಕಾಗಿದೆ. ಗರ್ಭಿಣಿಯರು, ರೋಗಿಗಳು ಆಸ್ಪತ್ರೆಗೆ ಹೋಗಲು ಪರದಾಡುವಂತಾಗಿದೆ. ಆದರೆ ಜನರ ಕೂಗು ಮಾತ್ರ ಯಾರಿಗೂ ಕೇಳಿಸುತ್ತಿಲ್ಲ.
ಹಾಳಾಗಿರುವ ಸೇತುವೆ ದುರಸ್ತಿಗೆ ಕ್ರಮಕೈಗೊಳ್ಳುವುದಾಗಿ ಹೇಳುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಕೆಲಸಕ್ಕೆ ಮುಂದಾಗಿಲ್ಲ. ಹೀಗಾಗಿ ಇಲ್ಲಿನ ನೆರೆ ಸಂತ್ರಸ್ತರು ಇನ್ನೂ ಚೇತರಿಸಿಕೊಳ್ಳಲು ಆಗುತ್ತಿಲ್ಲ.