– ವಧು ಇಲ್ಲದೆ ಹಿಂತಿರುಗಲ್ಲ ಎಂದು ಹಠ ಹಿಡಿದ ವರ
– ಗ್ರಾಮದ ಮತ್ತೊಬ್ಬ ಯುವತಿ ಜೊತೆ ವರನ ಮದುವೆ
ಪಾಟ್ನಾ: ಮದುವೆಯಾದ ಕೆಲವೇ ಗಂಟೆಗಳಲ್ಲಿ ಪ್ರಿಯಕರನ ಜೊತೆ ವಧು ಎಸ್ಕೇಪ್ ಆದ ಘಟನೆ ಬಿಹಾರದ ಗೋಪಾಲ್‍ಗಂಜ್‍ನಲ್ಲಿ ನಡೆದಿದೆ.
ವಧುವಿನ ಕಡೆಯವರು ಖುಷಿಯಿಂದ ವರನನ್ನು ಮದುವೆ ಮಂಟಪಕ್ಕೆ ಸ್ವಾಗತಿಸಿದ್ದರು. ಊಟ ಮಾಡಿದ ಬಳಿಕ ವರ ಮಂಟಪಕ್ಕೆ ಹೋಗಿ ಮದುವೆಯ ಎಲ್ಲಾ ಶಾಸ್ತ್ರವನ್ನು ನೆರವೇರಿಸಿದ್ದಾನೆ. ಮದುವೆ ಆದ ನಂತರ ವಧುವನ್ನು ಬೀಳ್ಕೊಡಲು ಎಲ್ಲ ತಯಾರಿ ನಡೆಸಲಾಗುತ್ತಿತ್ತು. ಈ ನಡುವೆ ವಧು ತನ್ನ ಪ್ರಿಯಕರನ ಜೊತೆ ಪರಾರಿ ಆಗಿದ್ದಾಳೆ ಎಂಬ ಸುದ್ದಿ ಕೇಳಿ ಬಂತು. ಈ ವಿಷಯ ತಿಳಿದ ವರ ಬೇಸರಗೊಂಡು ನಾನು ವಧು ಇಲ್ಲದೆ ಇಲ್ಲಿಂದ ಹಿಂತಿರುಗುವುದಿಲ್ಲ ಎಂದು ಹಠ ಹಿಡಿದಿದ್ದರು.
ವಧು ತನ್ನ ಪ್ರಿಯಕರನ ಜೊತೆ ಪರಾರಿಯಾದ ನಂತರ ಇಬ್ಬರ ಕುಟುಂಬಸ್ಥರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ಬಳಿಕ ವಧುವಿನ ಕುಟುಂಬಸ್ಥರು ವರನ ಕಡೆಯವರಿಗೆ ಸಮಾಧಾನ ಮಾಡಿ ಗ್ರಾಮದ ಮತ್ತೊಬ್ಬ ಯುವತಿ ಜೊತೆ ವರನಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಮತ್ತೊಬ್ಬ ಯುವತಿಯ ಜೊತೆ ಮದುವೆ ಮಾಡಿಸಿದಾಗ ವರ ಹಾಗೂ ಆತನ ಕುಟುಂಬಸ್ಥರು ಕೋಪ ಮರೆತು ಶಾಂತರಾದರು.
ವರ ಹಠ ಮಾಡುತ್ತಿರುವುದನ್ನು ನೋಡಿದ ವಧುವಿನ ತಂದೆ ತನ್ನ ಪಕ್ಕದ ಮನೆಯಲ್ಲಿ ವಾಸಿಸುವ ಯುವತಿ ಜೊತೆ ವರನ ಮದುವೆ ಮಾಡಲು ನಿರ್ಧರಿಸಿದ್ದರು. ವರ ಯುವತಿಯನ್ನು ನೋಡಿ ಮದುವೆಯಾಗಲು ಒಪ್ಪಿಕೊಂಡನು. ಬಳಿಕ ವರ ಒಂದೇ ದಿನ ಎರಡು ಬಾರಿ ಮದುವೆಯಾದನು. ಮದುವೆ ಆದ ನಂತರ ಆ ಯುವತಿಯನ್ನು ಕುಟುಂಬಸ್ಥರು ಸಂತೋಷದಿಂದ ಆಕೆಯ ಪತಿಯ ಮನೆಗೆ ಕಳುಹಿಸಿಕೊಟ್ಟರು.