ಹೈದರಾಬಾದ್: ವರದಕ್ಷಿಣೆ ವಿಚಾರಕ್ಕೆ ಬಹಳಷ್ಟು ಮದುವೆಗಳು ಮುರಿದಿರುವುದನ್ನು ನಾವು ಕಂಡಿದ್ದೇವೆ. ಆದರೆ ಹೈದರಾಬಾದ್ (Hyderabad) ಹೊರವಲಯ ಘಟ್‍ಕೇಸರ್‌ನಲ್ಲಿ (Ghatkesar) ನಡೆಯುತ್ತಿದ್ದ ಮದುವೆಯೊಂದು (Marriage) ವಧುದಕ್ಷಿಣೆ (Dowry) ವಿಚಾರಕ್ಕೆ ಮುರಿದು ಹೋಗಿದೆ.
ಮದುವೆಗೂ ಮುನ್ನ ವಧುದಕ್ಷಿಣೆಯಾಗಿ ಎರಡು ಲಕ್ಷ ರೂ. ನೀಡಲು ಮಾತುಕತೆ ನಡೆದಿತ್ತು. ಇದಕ್ಕೆ ಒಪ್ಪಿದ್ದ ವರನ ಕುಟುಂಬಸ್ಥರು ಹಣವನ್ನು ವಧುವಿನ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದರು. ಮದುವೆಗೆ ಎಲ್ಲಾ ತಯಾರಿಗಳೂ ನಡೆದಿದ್ದವು. ಆದರೆ ಕಡೆ ಕ್ಷಣದಲ್ಲಿ ಮನಸ್ಸು ಬದಲಿಸಿದ ಯುವತಿ ವಧುದಕ್ಷಿಣೆ ಕಡಿಮೆಯಾಗಿದೆ ಎಂದು ಆರೋಪಿಸಿ ಮದುವೆಗೆ ನಿರಾಕರಿಸಿದ್ದಾಳೆ. ಇದನ್ನೂ ಓದಿ: ಮದುವೆಗೆ ವಿರೋಧ – ಬೆಟ್ಟದಿಂದ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ
ಅಶ್ವರಾವ್‍ಪೇಟೆಯಿಂದ (Aswaraopeta) ವಿವಾಹ ಸ್ಥಳಕ್ಕೆ ತೆರಳಬೇಕಿದ್ದ ವಧು ಮದುವೆಗೆ ನಿರಾಕರಿಸಿ ಮನೆಯಲ್ಲೆ ಉಳಿದುಕೊಂಡಿದ್ದಾಳೆ. ಯುವತಿಯ ನಿರ್ಧಾರ ತಿಳಿಯುತ್ತಿದ್ದಂತೆ ವರನ ಮನೆಯವರು ಆಘಾತಗೊಂಡಿದ್ದಾರೆ. ಪೊಲೀಸ್ ಠಾಣೆಗೆ ತೆರಳಿ ವಧುವಿನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ಪೊಲೀಸರು ವಧುವಿನ (Bride) ಕುಟುಂಬಸ್ಥರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ನಂತರ ಯುವತಿ ಮದುವೆಗೆ ಆಸಕ್ತಿ ಹೊಂದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಸಂಧಾನ ನಡೆಸಿದ್ದಾರೆ. ದೂರು ದಾಖಲಿಸದೇ ಪ್ರಕರಣ ಅಂತ್ಯಗೊಳಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ: ತೇಜಸ್ವಿ