ಲಕ್ನೋ: ಮದುವೆಯಾಗಿ ಕೆಲವೇ ನಿಮಿಷಗಳಲ್ಲಿ ನೋಡನೋಡುತ್ತಿದ್ದಂತೆ ವರನ ಮುಂದೆ ವಧು ಪ್ರಿಯಕರನ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಸುಲ್ತಾನ್‍ಪುರ್ ನ ಕೋತ್ವಾಲಿಯಲ್ಲಿ ನಡೆದಿದೆ.
ವಧು ಅದ್ಧೂರಿಯಾಗಿ ಮದುವೆಯಾದ ಮೇಲೆ ತನ್ನ ತವರು ಮನೆಯನ್ನು ಬಿಟ್ಟು ಪತಿಯ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಳು. ಆ ಕಾರಿನ ಹಿಂದೆ ಕುಟುಂಬದವರು ಹಾಗೂ ಸಂಬಂಧಿಕರು ಕೂಡ ಹೋಗುತ್ತಿದ್ದರು.
ಕಾರಿನಲ್ಲಿ ಹೋಗುತ್ತಿದ್ದಾಗ ಕೆಲವೇ ನಿಮಿಷದಲ್ಲಿ ವಧು ನನಗೆ ತಲೆನೋವು ಆಗುತ್ತಿದೆ ಹಾಗೂ ವಾಂತಿ ಬರುವ ಹಾಗೇ ಆಗುತ್ತಿದೆ ಎಂದು ಸುಳ್ಳು ಹೇಳಿ ಕಾರನ್ನು ನಿಲ್ಲಿಸಿದ್ದಾಳೆ. ನಂತರ ಕಾರಿನಿಂದ ಇಳಿದು ಫೋನಿನಲ್ಲಿ ಯಾರ ಜೊತೆ ಮಾತನಾಡಿದ್ದಾಳೆ.
ತನ್ನ ಪತ್ನಿಯ ಆರೋಗ್ಯದ ಬಗ್ಗೆ ವಿಚಾರಿಸಲು ವರ ಕಾರಿನಿಂದ ಇಳಿದಿದ್ದಾನೆ. ಆಗ ವಧು ವರನಲ್ಲಿ ನಾನು ಬರುತ್ತೇನೆ ನೀವು ಈಗ ಕಾರಿನಲ್ಲಿ ಕುಳಿತುಕೊಳ್ಳಿ ಎಂದಿದ್ದಾಳೆ. ತನ್ನ ಪತ್ನಿಯ ಮಾತನ್ನು ಒಪ್ಪಿ ವರ ಕಾರಿನಲ್ಲಿ ಕುಳಿತುಕೊಂಡಿದ್ದಾನೆ.
ವಧು ಈಗ ಬರುತ್ತಾಳೆ ಎಂದು ವರ ಕಾರಿನಲ್ಲಿ ಕುಳಿತ್ತಿದ್ದರೆ ಆ ಕ್ಷಣದಲ್ಲಿ ಆಕೆಯ ಪ್ರಿಯಕರ ಬೈಕಿನಲ್ಲಿ ಬಂದಿದ್ದಾನೆ. ಪ್ರಿಯಕರ ಬಂದಿದ್ದೆ ತಡ ಆತನ ಬೈಕಿನಲ್ಲಿ ಕುಳಿತು ಇಬ್ಬರು ಪರಾರಿಯಾಗಿದ್ದಾರೆ. ಕಣ್ಣ ಮುಂದೆಯೇ ಈ ಘಟನೆ ನೋಡಿದ ಸಂಬಂಧಿಕರು ಒಂದು ಕ್ಷಣ ದಂಗಾಗಿದ್ದಾರೆ.
ನಂತರ ವರ, ಸಂಬಂಧಿಕರು ವಧುವಿನ ಪ್ರಿಯಕರನ ಮನೆಗೆ ಹೋಗಿದ್ದಾರೆ. ಅಲ್ಲದೇ ಪೊಲೀಸರಿಗೂ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ವಧುವಿನ ಪೋಷಕರು ಪ್ರಿಯಕರನ ವಿರುದ್ಧ ಕಿಡ್ನಾಪ್ ದೂರನ್ನು ನೀಡಿದ್ದಾರೆ. ಆದರೆ ಪೊಲೀಸರು ಇದುವರೆಗೂ ಕೇಸನ್ನು ದಾಖಲಿಸಿಕೊಳ್ಳಲಿಲ್ಲ ಎಂದು ವರದಿಯಾಗಿದೆ.