ಬೆಂಗಳೂರು: ರಾಜ್ಯ ಸರ್ಕಾರದ (State Government) ವಿರುದ್ಧ ನಿರಂತರವಾಗಿ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧ ಅನಾಮಿಕರೊಬ್ಬರು ಬರೆದ ಪತ್ರ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಆಹಾರ ಇಲಾಖೆಯಲ್ಲೂ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.
ಆಹಾರ ಇಲಾಖೆ (Food Department) ಅಧಿಕಾರಿಗಳ ವಿರುದ್ಧ ಲಂಚದ ಬಾಂಬ್ ಹಾಕಿದ್ದಾರೆ. ಪಡಿತರ ವಿತರಕರೇ ಸಿಎಂ ಸೇರಿದಂತೆ ಸಚಿವ ಕೆ.ಹೆಚ್ ಮುನಿಯಪ್ಪ ಅವರಿಗೆ ಪಿನ್ ಟು ಪಿನ್ ಮಾಹಿತಿ ಕೊಟ್ಟು ಪತ್ರ ಬರೆದಿದ್ದಾರೆ. ತುಮಕೂರಿನ ಪಾವಗಡದ ಶಿರಸ್ತೇದಾರ ಕೃಷ್ಣಮೂರ್ತಿ ಹಾಗೂ ಆಹಾರ ನಿರೀಕ್ಷಕ ಮಂಜುನಾಥ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಅಧಿಕಾರಿಗಳು ಪ್ರತೀ ನ್ಯಾಯಬೆಲೆ ಅಂಗಡಿಯವರಿಂದ ಲಂಚ ಕೊಡುವಂತೆ ಪೀಡಿಸುತ್ತಿದ್ದಾರೆ. ಕಮಿಷನ್ ಕೊಡದೇ ಇದ್ದರೇ ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಿಂಗ್ ಫಿಷರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ – 25 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ
ಅಹಾರ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಮಾತನಾಡಿ, ಈ ಆರೋಪದ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದೆ. ಆದ್ರೆ ಅನ್ನಭಾಗ್ಯದ ಕೆಲಸ ಕಾರ್ಯದಲ್ಲಿ ನಾವು ಒತ್ತಡದಲ್ಲಿದ್ದೆವು. ಆರೋಪ ಎದುರಿಸುತ್ತಿರುವ ಇಬ್ಬರು ಸಿಬ್ಬಂದಿಗೂ ನಾವು ನೋಟಿಸ್ ನೀಡಿದ್ದೇವೆ. ಈ ಬಗ್ಗೆ ವಿಚಾರಣೆ ಕೂಡ ನಡೆಯುತ್ತಿದೆ. ಈಗಾಗಲೇ ಆಂತರಿಕ ವಿಚಾರಣೆಗೆ ಪ್ರತ್ಯೇಕ ಟೀಂ ರಚನೆ ಆಗಿದೆ. ಈ ತಿಂಗಳ ಅಂತ್ಯದಲ್ಲಿ ತನಿಖಾ ವರದಿ ನಮ್ಮ ಕೈಸೇರಲಿದೆ. ಒಂದು ವೇಳೆ ಆರೋಪ ನಿಜವಾಗಿದ್ರೆ ಕಠಿಣ ಕ್ರಮ ವಹಿಸುತ್ತೇವೆ. ತನಿಖಾ ವರದಿ ಬಾರದೇ ಏನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Web Stories