ಚಿತ್ರದುರ್ಗ: ಹೆಸರಿಗೆ ಮಾತ್ರ ಸರ್ಕಾರಿ ಜಿಲ್ಲಾ ಆಸ್ಪತ್ರೆ, ಆದರೆ ಅಲ್ಲಿ ಯಾವುದೇ ಚಿಕಿತ್ಸೆ ಹಾಗು ಸೇವೆ ಪಡೆಯಬೇಕೆಂದರೆ ರೋಗಿಗಳು ಹಣ ಕೊಡಲೇಬೇಕು. ಹೀಗಾಗಿ ಆಸ್ಪತ್ರೆಯಲ್ಲಿ ಗಾಡಿ ತಳ್ಳುವ ಸಿಬ್ಬಂದಿ ಸೇರಿದಂತೆ ಹೆರಿಗೆ ವಾರ್ಡಿನಲ್ಲಿರೋ ಸ್ಟಾಫ್ ನರ್ಸ್ ಗಳವರೆಗೆ ಲಂಚ ಕೇಳೋದು ಮಾಮೂಲಿಯಾಗಿದ್ದು, ಆಸ್ಪತ್ರೆ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.
ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಒಂದೆಡೆ ಆಸ್ಪತ್ರೆಯಲ್ಲಿ ಪುಟ್ಟ ಕಂದಮ್ಮಗಳ ಚಿಕಿತ್ಸೆಗಾಗಿ ಬಾಣಂತಿಯರು ಕಾದು ಕುಳಿತಿರುವ ದೃಶ್ಯಗಳು, ರೋಗಿಗಳು ಚಿಕಿತ್ಸೆಗಾಗಿ ಬಂದಿರುವ ದೃಶ್ಯಗಳು ಕಂಡುಬಂದರೆ, ಇನ್ನೊಂದೆಡೆ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯುವ ದೃಶ್ಯಗಳು ಕಾಣಸಿಗುತ್ತದೆ. ಈ ಆಸ್ಪತ್ರೆ ಹೆಸರಿಗೆ ಮಾತ್ರ ಜಿಲ್ಲೆಯ ಬೃಹತ್ ಆಸ್ಪತ್ರೆ, ಆದರೆ ಇಲ್ಲಿ ಚಿಕಿತ್ಸೆ ಅನ್ನೋದು ಮರೀಚಿಕೆಯಾಗಿದೆ. ರೋಗಿಗಳ ಸ್ಥಿತಿ ಸ್ವಲ್ಪ ಗಂಭೀರವಾದರೆ ಸಾಕು, ದಾವಣಗೆರೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಇಲ್ಲಿನ ವೈದ್ಯರು ಕಳಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.
Advertisement
Advertisement
ಇಲ್ಲಿನ ಸಿಬ್ಬಂದಿಗಳಂತೂ ಮಹಾಚತುರರು, ಮಾತು ಆಡಿದರೆ ಹಣ ಕೊಡಿ ಎನ್ನುತ್ತಾರೆ. ತುರ್ತು ಚಿಕಿತ್ಸೆ ಪಡೆದು ವಾರ್ಡ್‍ಗೆ ಶಿಫ್ಟ್ ಆಗಬೇಕೆಂದರೂ ಸಿಬ್ಬಂದಿಗೆ ಲಂಚ ಕೊಡಬೇಕು. ಅಲ್ಲದೆ ಹೆರಿಗೆ ಮಾಡಿಸುವುದರಿಂದ ಹಿಡಿದು ಬಾಣಂತಿಯನ್ನು ವಾರ್ಡಿಗೆ ಕಳುಹಿಸುವಾಗಲೂ ಲಂಚ ಕೊಡಬೇಕು. ಇಲ್ಲವಾದರೆ ಹೆರಿಗೆ ಕೊಠಡಿಯಿಂದ ಬಾಣಂತಿಯನ್ನ ಇಲ್ಲಿನ ಸಿಬ್ಬಂದಿಗಳು ಶಿಫ್ಟ್ ಸಹ ಮಾಡಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಈ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡದ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
Advertisement
ಈ ಲಂಚಾವತಾರದಿಂದ ಬೇಸತ್ತ ನಾಗರಿಕರು ಈ ಪ್ರಕರಣದಲ್ಲಿ ರೋಗಿಗಳ ರಕ್ತ ಹೀರುತ್ತಿರುವ ಲಂಚಬಾಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಈ ಬಗ್ಗೆ ಜಿಲ್ಲಾಸ್ಪತ್ರೆಯ ಸರ್ಜನ್ ಜಯಪ್ರಕಾಶ್ ಅವರನ್ನ ಕೇಳಿದರೆ, ಪ್ರಕರಣ ಕುರಿತು ಆಸ್ಪತ್ರೆಯ ಸಿಬ್ಬಂದಿಯನ್ನ ವಿಚಾರಣೆಗೊಳಪಡಿಸುತ್ತೇವೆ. ಅವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಕಸ ಗುಡಿಸುವವರಿಂದ ಹಿಡಿದು ಆಯುಷ್ಮಾನ್ ಕಾರ್ಡ್ ವಿತರಿಸುವ ಗುಮಾಸ್ತ ಕೂಡ ಲಂಚ ಪಡೆಯುತ್ತಿದ್ದಾರೆ. ಇಷ್ಟೇಲ್ಲ ನಡೆಯುತ್ತಿದ್ದರು ಸಹ ಜಿಲ್ಲಾ ಆರೋಗ್ಯ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
Advertisement
ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ ಎಂದು ನಾಮಫಲಕ ಹಾಕಿರುವ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಲಂಚಾವತಾರದಲ್ಲಿ ಭಾಗಿಯಾಗಿರೋ ಆರೋಪಿಗಳಿಗೆ ಬಿಸಿ ಮುಟ್ಟಿಸಿ, ಉಳಿದವರನ್ನ ಎಚ್ಚರಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.