ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಾಳ ಹೊಬಳಿಯ ಗ್ರಾಮ ಲೆಕ್ಕಾಧಿಕಾರಿ (Village Accountant) ಲಂಚವತಾರಕ್ಕೆ ಬೇಸತ್ತ ಗ್ರಾಮಸ್ಥರು ಅಧಿಕಾರಿ ಲಂಚ (Bribe) ಪಡೆಯುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಜರುಗಬೇಕು ಎಂದು ಆಗ್ರಹಿಸಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತ ರೈತರು (Farmers) ಪಹಣಿ ತಿದ್ದುಪಡಿಗೆ 5,000 ರೂ. ಬೇಡಿಕೆಯಿಟ್ಟಿದ್ದ ನಾಗರಾಳ ಹೊಬಳಿಯ ಗ್ರಾಮ ಲೆಕ್ಕಾಧಿಕಾರಿ ಶರಣಗೌಡರಿಗೆ ಲಂಚ ನೀಡುವ ವೀಡಿಯೋ ಹರಿಬಿಟ್ಟಿದ್ದಾರೆ. ಬೊಮ್ಮನಾಳ ಗ್ರಾಮದ ರೈತ ಹೊನ್ನನಗೌಡ ಪಾಟೀಲ್ ಅವರಿಂದ ಗ್ರಾಮ ಲೆಕ್ಕಾಧಿಕಾರಿ ಲಂಚ ಪಡೆದಿದ್ದಾರೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ
Advertisement
Advertisement
ಬಹಿರಂಗವಾಗಿ ಟೀ ಅಂಗಡಿಯಲ್ಲಿ ರೈತರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿ ಯಾವುದೇ ಮುಜುಗರ, ನಾಚಿಕೆಯಿಲ್ಲದೆ ಹಣ ತೆಗೆದುಕೊಂಡಿದ್ದಾರೆ. ನಾಲ್ವರು ಅಣ್ಣ-ತಮ್ಮಂದಿರ ಹೆಸರಿಗೆ ಜಮೀನಿನ ಪಹಣಿ ತಿದ್ದುಪಡಿಗೆ ಹಣ ವಸೂಲಿ ಮಾಡಿದ್ದಾರೆ. ಒಬ್ಬರಿಗೆ 5,000 ರೂ. ನಂತೆ ಒಟ್ಟು ನಾಲ್ವರಿಂದ 20,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ.
Advertisement
5,000 ರೂ. ಗಿಂತ ಕಡಿಮೆ ಹಣ ಕೊಟ್ಟರೆ ವಾಪಸ್ ಕೊಡುವಂತೆ ತೋರ್ಪಡಿಸಿಕೊಂಡಿರುವ ಶರಣಗೌಡ ಇದರಲ್ಲಿ ನನಗೆ ಏನೂ ಉಳಿಯುವುದಿಲ್ಲ ಎಂದು ರೈತನಿಂದ 5 ಸಾವಿರ ರೂ. ಲಂಚ ಪಡೆದಿದ್ದಾರೆ. ಪಹಣಿ ತಿದ್ದುಪಡಿಗೆ ಹಂತ ಹಂತದಲ್ಲೂ ಲಂಚ ಕೊಡಬೇಕಿರುವುದರಿಂದ ರೈತರು ಬೇಸತ್ತಿದ್ದಾರೆ. ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಿಷೇಧಿತ PFI ನಾಯಕರಿಗೆ ಸಂಬಂಧಿಸಿದ ಕೇರಳದ 56 ಕಡೆ NIA ದಾಳಿ