ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನ ಕಳೆದಂತೆ ಗಗನಕ್ಕೇರುತ್ತಿದೆ. ಈ ನಡುವೆ ಪ್ರಸಿದ್ಧ ಜಾಗತಿಕ ಹಣಕಾಸು ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 150 ರೂ. ತಲುಪಲಿದೆ ಎಂದು ವರದಿಮಾಡಿದೆ.
ಇದೀಗ ಗೋಲ್ಡ್‌ಮನ್ ಸ್ಯಾಚ್ಸ್ ವರದಿಯ ಪ್ರಕಾರ, ಮುಂದಿನ ವರ್ಷದ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್(159 ಲೀಟರ್) 110 ಡಾಲರ್ ಏರಬಹುದು ಎಂದು ವರದಿ ಮಾಡಿದೆ. ಪ್ರಸ್ತುತ, ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‍ಗೆ 85 ಡಾಲರ್(ಅಂದಾಜು 6,366 ರೂ.) ಇದೆ. ತೈಲ ಬೆಲೆಗಳು ಈಗಿನ ಬೆಲೆಗೆ ಹೋಲಿಸಿದರೆ ಮುಂದಿನ ವರ್ಷದ ವೇಳೆಗೆ ಶೇ.30 ರಷ್ಟು ಹೆಚ್ಚಾಗಬಹುದು. ಜಾಗತಿಕ ಬೇಡಿಕೆ ಪೂರೈಕೆಯು ಅಸಮತೋಲನಗೊಂಡಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ನ ತೈಲ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾದಿಂದಾಗಿ ಜಾಗತಿಕ ಮಟ್ಟದ ಮಾರುಕಟ್ಟೆಯಲ್ಲಿ ಈ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ದೊಡ್ಡ ರಸ್ತೆ ಗುಂಡಿಗೆ ಬಿದ್ದ ವಿದ್ಯಾರ್ಥಿನಿಯರು!
ಕಚ್ಚಾ ತೈಲ ಬೆಲೆಯ ಹೆಚ್ಚಳವು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ದೊಡ್ಡ ಪರಿಣಾಮ ಬೀರಲಿದ್ದು, ಗೋಲ್ಡ್‍ಮನ್ ಸ್ಯಾಚ್ಸ್ ವರದಿಯ ಪ್ರಕಾರ ಕಚ್ಚಾ ತೈಲ ಬೆಲೆಯಲ್ಲಿ ಶೇ.30 ರಷ್ಟು ಹೆಚ್ಚಳವಾದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 150 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 140 ರೂ. ತಲುಪುತ್ತದೆ. ಜೊತೆಗೆ ಗ್ಯಾಸ್ ಬೆಲೆ 1,000 ರೂ ಗಡಿದಾಟುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಆರ್ಯನ್ ಖಾನ್ ಬಂಧನ ಕೇಸ್‍ಗೆ ತಿರುವು – ಸಮೀರ್ ಆಪ್ತ ಕಿರಣ್ ಗೋಸಾವಿ ಬಂಧನ
ಬೆಲೆ ಏರಿಕೆ ಯಾಕೆ?
ಕೋವಿಡ್ 19 ವೇಳೆ ರಾಷ್ಟ್ರಗಳು ಲಾಕ್‍ಡೌನ್ ಹೇರಿತ್ತು. ಈ ವೇಳೆ ಬೇಡಿಕೆ ಕಡಿಮೆಯಾಗಿ ಬ್ಯಾರೆಲ್ ತೈಲ ದರ 19 ಡಾಲರ್ಗೆ ಇಳಿಕೆಯಾಗಿತ್ತು. ಈ ವೇಳೆ ತೈಲ ಉತ್ಪಾದನೆ ಮಾಡುತ್ತಿರುವ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದ್ದವು. 2020ರ ಮಧ್ಯ ಭಾಗದ ಬಳಿಕ ರಾಷ್ಟ್ರಗಳು ಲಾಕ್‍ಡೌನ್ ತೆರವು ಮಾಡಿದ್ದರೂ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಳ ಮಾಡುತ್ತಿಲ್ಲ. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ
ಬೇಡಿಕೆ ಜಾಸ್ತಿ ಇದ್ದರೂ ಉತ್ಪಾದನೆ ಹೆಚ್ಚಳ ಮಾಡದ ಕಾರಣ ಬೆಲೆ ಏರತೊಡಗಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಉತ್ಪಾದನೆ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟರೂ ಒಪೆಕ್ ರಾಷ್ಟ್ರಗಳು ಕೊರೊನಾಗಿಂತ ಮೊದಲು ಮಾಡುತ್ತಿದ್ದಷ್ಟು ಉತ್ಪಾದನೆ ಮಾಡುತ್ತಿಲ್ಲ. ಕೋವಿಡ್ ಸಮಯದಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚು ಮಾಡದ ಕಾರಣ ವಿಶ್ವಾದ್ಯಂತ ತೈಲ ಬೆಲೆ ಏರತೊಡಗಿದೆ.
ಜಿಎಸ್‍ಟಿಗೆ ಬರುತ್ತಾ?
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ಬಗ್ಗೆ ಜನಸಾಮಾನ್ಯರು ಮತ್ತು ರಾಜಕೀಯ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದರೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಸರ್ಕಾರಕ್ಕೆ ಮನಸ್ಸು ಮಾಡಿದಂತಿಲ್ಲ. ತೈಲ ಬೆಲೆ ಭಾರೀ ಏರಿಕೆಯಾದರೆ ತೈಲವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ವಾದಕ್ಕೆ ಬೆಲೆ ಸಿಗಬಹುದು. ರಾಜ್ಯ ಸರ್ಕಾರಗಳು ಒಪ್ಪಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.