DistrictsKarnatakaLatestMain PostUdupi

ಸರ್ಕಾರಿ ದೇಗುಲದಲ್ಲಿ ತಪ್ತಮುದ್ರಾಧಾರಣೆಗೆ ಬ್ರೇಕ್ – ಸತ್ಯನಾರಾಯಣ ಪೂಜೆ, ಶನಿಕಥೆಗೆ ಅಡ್ಡಿ

ಉಡುಪಿ: ಸುಮ್ಮನಿರಲಾರದವರು ಇರುವೆ ಬಿಟ್ಕೋತಾರಲ್ಲ, ಹಾಗಾಗಿದೆ ಧಾರ್ಮಿಕ ದತ್ತಿ ಇಲಾಖೆ ಕಥೆ. ಚರ್ಚೆ ಮಾಡದೆ, ದೂರೇ ಬಾರದೆ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ ಆದೇಶದಿಂದ ರಾಜ್ಯದ ವೈಷ್ಣವರು ಕೋಪಗೊಂಡಿದ್ದಾರೆ. ಆದೇಶದ ಪ್ರಕಾರ ಮುಜರಾಯಿ ಇಲಾಖೆ (Muzrai Department) ಯ ದೇಗುಲಗಳಲ್ಲಿ ಮುದ್ರಾಧಾರಣೆ ಮಾಡಬಾರದಂತೆ. ದೇವರ ಫೋಟೋ ಇಟ್ಟು ಧಾರ್ಮಿಕ ಕಾರ್ಯಕ್ರಮ ಮಾಡಬಾರದಂತೆ.

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾ ಧಾರಣೆ, ಯಾವುದೇ ಜಯಂತಿ ಆಚರಣೆಗಳಿಗೆ ಅವಕಾಶವಿಲ್ಲ ಎಂದು ಆಯುಕ್ತರು ಆದೇಶ ಮಾಡಿದ್ದಾರೆ. ವೈಷ್ಣವರ ಪ್ರಧಾನ ಸಂಪ್ರದಾಯ ತಪ್ತ ಮುದ್ರಾಧಾರಣೆ ಸಂಪ್ರದಾಯವನ್ನು ಸರ್ಕಾರಿ ದೇಗುಲದಲ್ಲಿ ಮಾಡಬಾರದು ಎಂಬ ಆದೇಶಕ್ಕೆ ಮಾಧ್ವ ಸಂಪ್ರದಾಯಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯಾ ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿ ಸಂಪ್ರದಾಯಗಳಿಗೆ ವಿರುದ್ಧವಾದ ಆಚರಣೆ ನಡೆಸುವಂತಿಲ್ಲ ಎಂಬ ಆದೇಶಕ್ಕೆ ಮಾಧ್ವರು ಗರಂ ಆಗಿದ್ದಾರೆ. ಇದನ್ನೂ ಓದಿ: ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ದೊಡ್ಡವನಾಗಲ್ಲ: ಜಾರಕಿಹೊಳಿ ಕಿವಿ ಹಿಂಡಿದ ಯಡಿಯೂರಪ್ಪ

ಕರ್ನಾಟಕದ ಕರಾವಳಿ, ಬೆಂಗಳೂರು (Bengaluru), ಮೈಸೂರು (Mysuru), ಉತ್ತರ ಕರ್ನಾಟಕ (UttarKarnataka) ದ ಹಲವು ಜಿಲ್ಲೆಗಳಲ್ಲಿ ಮಾಧ್ವ ತತ್ವ ಅನುಸರಿಸುವ ಬ್ರಾಹ್ಮಣರಿದ್ದಾರೆ. ಶಿವನ ದೇಗುಲ, ದೇವಿ ದೇವಸ್ಥಾನಗಳಲ್ಲಿ ಆ ಪರಂಪರೆಯ ಸಂಪ್ರದಾಯದ ಆಚರಣೆ ಹೊರತುಪಡಿಸಿ ಮತ್ಯಾವುದೇ ಧಾರ್ಮಿಕ ಪೂಜೆ ಪುನಸ್ಕಾರ ಮಾಡಬಾರದು ಎಂಬುದು ಈ ಆದೇಶದ ಮುಖ್ಯ ವಿಷಯ. ಅದ್ವೈತ, ವಿಶಿಷ್ಟಾದ್ವೈತ, ದೇಗುಲದಲ್ಲಿ ತಪ್ತಮುದ್ರಾಧಾರಣೆ ಫೋಟೋಗಳನ್ನು ಇಟ್ಟು ಮಾಡುವ ಆರಾಧನೆ ನಡೆಸಕೂಡದು ಎಂಬ ಆದೇಶ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ತ್ರಿಮತಸ್ಥ ಬ್ರಾಹ್ಮಣ ಪಂಗಡಗಳ ನಡುವೆ ಒಡಕುಂಟುಮಾಡಲು ಪಿತೂರಿ ಮಾಡಿದ್ದಾರೆ. ಹುಳಿ ಹಿಂಡುವ ಕೆಲಸ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬೆಳವಣಿಗೆ ನನ್ನ ಗಮನಕ್ಕೆ ಬಂದಿಲ್ಲ. ಏನಿದು ತಪ್ತ ಮುದ್ರಾಧಾರಣೆ ಅಂತ ಸಿಎಂ ಬೊಮ್ಮಾಯಿ ಮಾಧ್ಯಮದವರಿಗೇ ವಾಪಸ್ ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ಆದೇಶದ ಹಿಂದಿರುವ ಷಡ್ಯಂತ್ರದ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ. ಸರ್ಕಾರಿ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಮಾಧ್ವ ಸಮುದಾಯ ಆಗ್ರಹಿಸಿದೆ. ಉಡುಪಿ ಕೃಷ್ಣಮಠ, ಅಷ್ಟ ಮಠಾಧೀಶರು ಕೂಡಾ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button