ಪರಾರಿಯಾಗಲು ಮಗಳ ವೇಷ ಧರಿಸಿದ್ದ ಗ್ಯಾಂಗ್‍ಸ್ಟರ್ ಮತ್ತೆ ಜೈಲು ಸೇರಿದ

Public TV
1 Min Read
brazil

ಬ್ರೆಜಿಲಿಯಾ: ಹೆಣ್ಣಿನ ವೇಷ ಧರಿಸಿ ಕೈದಿಯೋರ್ವ ಜೈಲಿನಿಂದ ಪರಾರಿ ಆಗಲು ಯತ್ನಿಸಿ, ಪೊಲೀಸರ ಕೈಗೆ ಸೆರೆಸಿಕ್ಕಿ ಪುನಃ ಜೈಲು ಸೇರಿದ ವಿಚಿತ್ರ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

ಕೈದಿಗಳು ಜೈಲಿನಿಂದ ಎಸ್ಕೇಪ್ ಆಗಲು ಯಾವೆಲ್ಲಾ ಚಿತ್ರ-ವಿಚಿತ್ರ ಉಪಾಯಗಳನ್ನು ಮಾಡುತ್ತಾರೆ ಎನ್ನುವುದಕ್ಕೆ ಬ್ರೆಜಿಲ್‍ನ ರಿಯೊ ಡಿ ಜನೈರೊದ ಪಶ್ಚಿಮ ಭಾಗದ ಜೈಲಿನ ಕೈದಿ ಉದಾಹರಣೆಯಾಗಿದ್ದಾನೆ. ಬ್ರೆಜಿಲ್‍ನಲ್ಲಿ ಡ್ರಗ್ಸ್ ಹಾಗೂ ಇತರೇ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಗುಂಪೊಂದರ ನಾಯಕನಾದ ಕ್ಲಾವಿನೋ ಡಾ ಸಿಲ್ವಾ ಖತರ್ನಾಕ್ ಎಸ್ಕೇಪ್ ಪ್ಲಾನ್ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.

brazil 1

ರಿಯೋ ಜೈಲಿನಲ್ಲಿ ಕೈದಿಯಾಗಿದ್ದ ಡಾ ಸಿಲ್ವಾ ಹೇಗಾದರೂ ಅಲ್ಲಿಂದ ಎಸ್ಕೇಪ್ ಆಗಬೇಕು ಎಂದು ಪ್ಲಾನ್ ಮಾಡುತ್ತಿದ್ದನು. ಇದೇ ವೇಳೆ ಅದೃಷ್ಟವೆನ್ನುವಂತೆ ಆತನನ್ನು ನೋಡಲು ಅವನ ಮಗಳು ಜೈಲಿಗೆ ಭೇಟಿ ನೀಡಿದ್ದಳು. ಆಗ ಮಗಳ ವೇಷ ಧರಿಸಿ, ಆಕೆಯನ್ನು ಜೈಲಿನಲ್ಲಿಯೇ ಬಿಟ್ಟು, ತಾನು ಅಲ್ಲಿಂದ ಎಸ್ಕೇಪ್ ಆಗೋದಕ್ಕೆ ಡಾ ಸಿಲ್ವಾ ಸಿದ್ಧನಾದನು. ಯಾರಿಗೂ ತಿಳಿಯದಂತೆ ಮಗಳಂತೆ ಬಟ್ಟೆ, ವಿಗ್ ಹಾಗೂ ಮುಖವಾಡ ಧರಿಸಿ ಸಿದ್ಧನಾಗಿ ಜೈಲಿಂದ ಹೊರ ಬರುತ್ತಿದ್ದ.

ಆದರೆ ಕೈದಿ ಹೆಣ್ಣು ವೇಷ ಧರಿಸಿದ್ದಾಗ ಆತ ವಿಚಿತ್ರವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ಪೊಲೀಸರಿಗೆ ಅನುಮಾನ ಮೂಡಿದ್ದು, ಆತನನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಆಗ ಸತ್ಯಾಂಶ ಹೊರಬಿದ್ದಿದ್ದು, ಪೊಲೀಸರು ಆತನನ್ನು ಹಿಡಿದು ಪುನಃ ಕಂಬಿ ಒಳಗಡೆ ಕಳುಹಿಸಿದ್ದಾರೆ.

brazil 2

ಖತರ್ನಾಕ್ ಖದೀಮ ತಾನು ಧರಿಸಿದ್ದ ವೇಷವನ್ನು ಬಿಚ್ಚುತ್ತಿರುವ ವಿಡಿಯೋವನ್ನೂ ಕೂಡ ಪೊಲೀಸರು ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ನಡೆದ ಬಳಿಕ ಡಾ ಸಿಲ್ವಾಗೆ ಪೊಲೀಸರು ಬಿಗಿ ಭದ್ರತೆ ಇರುವ ಕೊಠಡಿಗೆ ಶಿಫ್ಟ್ ಮಾಡಿದ್ದು, ಕೈದಿಗೆ ವಿಶೇಷ ಭದ್ರತೆ ನೀಡಿ, ಆತ ಮತ್ತೆ ಈ ರೀತಿ ಖತರ್ನಾಕ್ ಉಪಾಯವನ್ನು ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *