ನವದೆಹಲಿ: ರಾಷ್ಟ್ರೀಯ ಶೌರ್ಯ ಪ್ರಶಸ್ತಿ 2019ರ ಪಟ್ಟಿ ಪ್ರಕಟವಾಗಿದ್ದು, ರಾಜ್ಯದ ಇಬ್ಬರು ಮಕ್ಕಳು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಯಚೂರಿನ ವೆಂಕಟೇಶ್, ಉತ್ತರ ಕನ್ನಡದ ಆರತಿ ಸೇಠ್ ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳು. ಇಂದು ದೆಹಲಿಯಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಣೆಯಾಗಿದ್ದು, ದೇಶದ 22 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಇದನ್ನೂ ಓದಿ: ಪ್ರವಾಹದಲ್ಲಿ ಅಂಬುಲೆನ್ಸ್‌ಗೆ ದಾರಿ ತೋರಿಸಿದ ಬಾಲಕನಿಗೆ ಸಾಹಸ ಸೇವಾ ಪ್ರಶಸ್ತಿ
Advertisement
Advertisement
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವೆಂಕಟೇಶ್, ಪ್ರವಾಹ ಸಂದರ್ಭದಲ್ಲಿ ರಸ್ತೆ ಕಾಣದೆ ನಿಂತಿದ್ದ ಅಂಬುಲೆನ್ಸ್ ಗೆ ದಾರಿ ತೋರಿಸುವ ಮೂಲಕ ಐದು ಮಂದಿಯ ಪ್ರಾಣ ರಕ್ಷಣೆ ಮಾಡಿದ್ದ. ಮೃತ ದೇಹದೊಂದಿಗೆ ಐದು ಮಂದಿ ಹೊತ್ತಿದ್ದ ಅಂಬುಲೆನ್ಸ್ ಜಾಗಟ್ಕಲ್ ನಿಂದ ಯಾದಗಿರಿ ಕಡೆಗೆ ಹೊರಟಿತ್ತು. ಗುಂಗಾಲ್ ರಸ್ತೆಯಲ್ಲಿ ರೋಡ್ ಸಂಪೂರ್ಣ ಪ್ರವಾಹ ನೀರಿನಿಂದ ಆವೃತಗೊಂಡು ರಸ್ತೆ ಕಾಣದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಈ ವೇಳೆ ಅಂಬುಲೆನ್ಸ್ ನೆರವಿಗೆ ಬಂದಿದ್ದ ಬಾಲಕ ವೆಂಕಟೇಶ್, ಅಂಬುಲೆನ್ಸ್ ಡ್ರೈವರ್ ತನನ್ನು ಹಿಂಬಾಲಿಸುವಂತೆ ಸೂಚಿಸಿ ರಸ್ತೆ ದಾಟಿಸಲು ನೆರವು ನೀಡಿದ್ದ.
Advertisement
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ನವಿಲಗೋಣು ಗ್ರಾಮದ ಆರತಿ ಸೇಠ್, ಕೋಪೊದ್ರಿಕ್ತ ಹಸುವಿನ ದಾಳಿಯಿಂದ ತನ್ನ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದಳು. ಉದ್ರಿಕ್ತ ಹಸು ಬಾಲಕನ ಮೇಲೆ ದಾಳಿ ಮಾಡಲು ಬರುತ್ತಿತ್ತು. ಕೊಂಬಿನಿಂದ ಇನ್ನೇನು ತಿವಿಯುವುದರಲ್ಲಿ ಕ್ಷಣ ಮಾತ್ರದಲ್ಲಿ ತಮ್ಮನ ರಕ್ಷಣೆಗೆ ದಾವಿಸಿ, ಹಸು ಮತ್ತು ತಮ್ಮನ ನಡುವೆ ನಿಂತು ತಮ್ಮನ ಪ್ರಾಣ ರಕ್ಷಿಸಿದ್ದಳು. ಮಕ್ಕಳ ಈ ಧೈರ್ಯ ಪ್ರಶಂಸಿಸಿ ಈ ಪ್ರಶಸ್ತಿ ನೀಡಲಾಗಿದೆ.