ನವದೆಹಲಿ: ಭಾರತ ಹಾಗೂ ರಷ್ಯಾ ಸಹಯೋಗದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಯೋಜನೆಯನ್ನು ಕೇವಲ 1,300 ಕೋಟಿ ರೂ. ಬಂಡವಾಳ ಹೂಡಿ ಆರಂಭಿಸಲಾಗಿತ್ತು. ಆದರೆ ಈಗ 40 ಸಾವಿರ ಕೋಟಿ ರೂ. ವ್ಯವಹಾರ ಮಾಡುವ ಉದ್ಯಮವಾಗಿ ಪರಿವರ್ತನೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬ್ರಹ್ಮೋಸ್ ಏರೋಸ್ಪೇಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮಿಶ್ರಾ ಅವರು, ಸೂಪರ್ ಸಾನಿಕ್ ಕ್ಷಿಪಣಿ ಯೋಜನೆಯಂತೆ ರಷ್ಯಾ ಹಾಗೂ ಭಾರತದ ಜಂಟಿ ಉದ್ಯಮ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಾವು ಸಂಪತ್ತನ್ನು ಹೆಚ್ಚಿಸಿದ್ದೇವೆ, ಪರಿಸರ ಸಂರಕ್ಷಣೆ ಮಾಡಿದ್ದೇವೆ. ಅಷ್ಟೇ ಅಲ್ಲದೆ ಭಾರತ ಸರ್ಕಾರಕ್ಕೆ ಇಲ್ಲಿಯವರೆಗೂ 4 ಸಾವಿರ ಕೋಟಿ ರೂ.ವನ್ನು ತೆರಿಗೆ ರೂಪದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾವತಿಸಿದ್ದೇವೆ ಎಂದು ಸುಧೀರ್ ಮಿಶ್ರಾ ತಿಳಿಸಿದ್ದಾರೆ.
Advertisement
ಮೂಲ ಸೌಕರ್ಯಗಳನ್ನು ಕಲ್ಪಿಸಲು ನಾವು ಆರ್ಥಿಕ ಸಹಾಯವನ್ನು ವಿಸ್ತರಣೆ ಮಾಡಿದ್ದೇವೆ. ಜೊತೆಗೆ ತಂತ್ರಜ್ಞಾನ ಅಭಿವೃದ್ಧಿ ಪಡೆಯಲು ರಷ್ಯಾದ ವಿಜ್ಞಾನಿಗಳ ಸಹಾಯ ಪಡೆದಿದ್ದೇವೆ. ಸದ್ಯ 200 ಕೈಗಾರಿಕೆಗಳು ನಮ್ಮ ವ್ಯವಹಾರದ ಪಾಲುದಾರರಾಗಿದ್ದು, 20 ಸಾವಿರಕ್ಕೂ ಅಧಿಕ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ.
Advertisement
ಏನಿದು ಬ್ರಹ್ಮೋಸ್ ಯೋಜನೆ?
ಭಾರತದ ಡಿಆರ್‍ಡಿಒ ಹಾಗೂ ರಷ್ಯಾದ ಎನ್‍ಪಾಮ್ ಸಂಸ್ಥೆಗಳು ಜಂಟಿಯಾಗಿ ಬ್ರಹ್ಮೋಸ್ ಸರಣಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಭಾರತದ ಬ್ರಹ್ಮಪುತ್ರ ಹಾಗೂ ರಷ್ಯಾದ ಮಾಸ್ಕ್ವಾ ನದಿಗಳ ಹೆಸರನ್ನು ಈ ಯೋಜನೆಗೆ ಇಡಲಾಗಿದೆ. 1998ರಲ್ಲಿ 1,300 ಕೋಟಿ ರೂ. ಬಂಡವಾಳದಲ್ಲಿ ಆರಂಭವಾದ ಬ್ರಹ್ಮೋಸ್ ಕ್ಷಿಪಣಿ ಉದ್ಯಮ ಈಗ 40 ಸಾವಿರ ಕೋಟಿ ವ್ಯವಹಾರ ಮಾಡುವ ಉದ್ಯಮವಾಗಿ ಬೆಳೆದಿದೆ.
ಬ್ರಹ್ಮೋಸ್ ಕ್ಷಿಪಣಿಗಳನ್ನು ಯುದ್ಧನೌಕೆ, ಜಲಾಂತರ್ಗಾಮಿ, ನೆಲ ಮತ್ತು ಯುದ್ಧ ವಿಮಾನಗಳಿಂದ ಗುರಿಯತ್ತ ಉಡಾವಣೆ ಮಾಡಬಹುದು. ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಮೀರಿ ಇದು ಗುರಿ ತಲುಪಬಲ್ಲದು.
‘ಭಾರತ ಮತ್ತು ರಷ್ಯಾ ಜಂಟಿಯಾಗಿ ಬ್ರಹ್ಮೋಸ್ ಕ್ಷಿಪಣಿಯನ್ನು ನಿರ್ಮಿಸುತ್ತಿವೆ. ಈಗಿರುವ ಗರಿಷ್ಠ 400 ಕಿ.ಮೀ. ಶ್ರೇಣಿಯನ್ನು 500 ಕಿ.ಮೀ.ಗೆ ಹೆಚ್ಚಿಸಲಾಗುವುದು. ಇದೇ ವೇಳೆ ಕ್ಷಿಪಣಿಯ ವೇಗವನ್ನು ಹೆಚ್ಚಿಸುವ ಅಗತ್ಯವಿದೆ. ಸದ್ಯ ಬ್ರಹ್ಮೋಸ್ ಕ್ಷಿಪಣಿಯ ಗರಿಷ್ಠ ವೇಗ 2.8 ಮ್ಯಾಕ್. ಅದನ್ನು ಮೇಲ್ದರ್ಜೆಗೇರಿಸುವ ಮೂಲಕ ಹೈಪರ್‍ಸೌಂಡ್ ಅಂದರೆ 4.5 ಮ್ಯಾಕ್‍ಗಿಂತಲೂ ಅಧಿಕ ವೇಗದಲ್ಲಿ ಚಲಿಸುವಂತೆ ಮಾಡಲಾಗುವುದು,” ಎಂದು ಕಂಪನಿಯ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಅಲೆಕ್ಸಾಂಡರ್ ಮ್ಯಾಕ್ಸಿಚೆವ್ ಅವರು ಏಪ್ರಿಲ್‍ನಲ್ಲಿ ತಿಳಿಸಿದ್ದರು.
ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತೀಯ ವಾಯುಪಡೆ ಸೇರಲಿವೆ. ಐಎಎಫ್‍ಗಾಗಿಯೇ ‘ಬ್ರಹ್ಮೋಸ್ ಎನ್‍ಜಿ’ಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರ ತೂಕ ಈ ಹಿಂದಿನ 2.5 ಟನ್‍ನಿಂದ 1.5 ಟನ್‍ಗೆ ತಗ್ಗಲಿದೆ. ನೂತನ ಕ್ಷಿಪಣಿಯು ಹೆಚ್ಚು ಹಗುರವಾಗಿ ಇರಲಿದ್ದು, ಈ ಮೂಲಕ ಸುಖೋಯ್ ಸು-30ಎಂಕೆಐ ಮತ್ತು ತೇಜಸ್ ಯುದ್ಧವಿಮಾನಗಳಲ್ಲಿ ಒಂದೇ ಬಾರಿ ಹೆಚ್ಚಿನ ಕ್ಷಿಪಣಿಗಳನ್ನು ಅಳವಡಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದರು.