– 2 ವರ್ಷದ ಬಳಿಕ ರಾಜ್ಯದ ಟ್ಯಾಬ್ಲೋ ಆಯ್ಕೆ
– 11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಪ್ಪು ಶಿಲೆಯಿಂದ ನಿರ್ಮಾಣ
ಗದಗ: ಇತ್ತೀಚೆಗೆ ಪ್ರಾಚ್ಯವಸ್ತು ವಿಶೇಷ ಸಂಗ್ರಹಣೆಯಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಲಕ್ಕುಂಡಿ ಗ್ರಾಮದ ಬ್ರಹ್ಮ ಜಿನಾಲಯ (Brahma Jinalaya, Lakkundi) ಜನವರಿ 26 ರಂದು ದೆಹಲಿ ಗಣರಾಜ್ಯೋತ್ಸವದ ಪರೇಡ್‌ಗೆ (Republic Day Parade) ಆಯ್ಕೆ ಆಗಿದೆ.
Advertisement
ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡಿಸುವ ಪ್ರಕ್ರಿಯೆಗೆ ಮತ್ತು ಪ್ರಾಚ್ಯವಸ್ತು ಸಂರಕ್ಷಣೆಗೆ ಪೂರಕವಾಗಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಎಚ್.ಕೆ. ಪಾಟೀಲ್ (HK Patol) ಪ್ರವಾಸೋದ್ಯಮ ಇಲಾಖೆ ಸಚಿವರಾದ ನಂತರ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಕಾರಾತ್ಮಕ ಬೆಳವಣಿಗೆ ನಡೆಯುತ್ತಿದ್ದು, ಜೈನ ದೇವಾಲಯ ದೆಹಲಿಯ ಪರೇಡ್ ಗೆ ಆಯ್ಕೆ ಆಗಿದ್ದು, ಈ ಭಾಗದ ಜನರಲ್ಲಿನ ಸಂತಸ ಇಮ್ಮಡಿಗೊಳಿಸಿದೆ.
Advertisement
ಕಳೆದ ಎರಡು ವರ್ಷದಿಂದ ಕರ್ನಾಟಕದಿಂದ ಯಾವುದೇ ಟ್ಯಾಬ್ಲೋ (Tableau) ಆಯ್ಕೆ ಆಗಿರಲಿಲ್ಲ. ಈ ವರ್ಷ ಲಕ್ಕುಂಡಿ ಬ್ರಹ್ಮ ಜಿನಾಲಯ ಸ್ತಬ್ಧ ಚಿತ್ರಕ್ಕೆ ಆಯ್ಕೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ದೆಹಲಿಯಲ್ಲಿ ಟ್ಯಾಬ್ಲೋ ನಿರ್ಮಾಣ ಕಾರ್ಯ ಆರಂಭವಾಗಿದೆ. ನುರಿತ ಕಲಾವಿದರು ಫೈಬರ್‌ನಿಂದ ಬ್ರಹ್ಮ ಜಿನಾಲಯದ ಸ್ತಬ್ಧ ಚಿತ್ರ ತಯಾರಿಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಬಂಪರ್ ಕೊಡುಗೆ – ಧಾರವಾಡಕ್ಕೆ ಬಂತು ಪ್ರತ್ಯೇಕ ಪಾಲಿಕೆ
Advertisement
Advertisement
ದೇವಾಲಯದ ವಿಶೇಷತೆ ಏನು?
11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಪ್ಪು ಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಮೇಲ್ಭಾಗದಲ್ಲಿ ದ್ರಾವಿಡ ಶೈಲಿ ಹೊಂದಿರುವ ಬ್ರಹ್ಮ ಜಿನಾಲಯವು ಪೂರ್ವಾಭಿಮುಖವಾಗಿ ನಿರ್ಮಾಣಗೊಂಡಿದೆ. ಗರ್ಭಗೃಹ, ಅಂತರಾಳ, ಗೂಢ ಮಂಟಪ, ಅಗಮ ಮಂಟಪದಂತಹ ತಲವಿನ್ಯಾಸದಿಂದ ಕೂಡಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರವಾದ ಸಿಂಹಪೀಠದ ಮೇಲೆ ತೀರ್ಥಂಕರನ ಶಿಲ್ಪವಿದೆ. ಇಕ್ಕೆಲದಲ್ಲಿ ಇಬ್ಬರು ಚಾಮರಧಾರಿಗಳಿದ್ದಾರೆ. ಪೀಠದ ಸುತ್ತಲೂ ಮಕರ ತೋರಣದ ಅಲಂಕರಣೆಯಿದ್ದು, ಮೇಲ್ಬಾಗದಲ್ಲಿ ರತ್ನತ್ರಯರ ಪ್ರತೀಕವಾದ ಮುಕ್ಕೊಡೆಯಿದೆ.
ತೀರ್ಥಂಕರನನ್ನು ಈಗ ನೇಮಿನಾಥ ಎಂದು ಕರೆಯಲಾಗುತ್ತಿದೆ. ಗರ್ಭ ಗೃಹಕ್ಕೆ ಹೊಂದಿಕೊಂಡು ಅಂತರಾಳವಿದ್ದು, ಮೂಲೆಗಳಲ್ಲಿ ಅರ್ಧಕಂಬಗಳಿವೆ. ಮುಂಭಾಗದಲ್ಲಿ ಎರಡು ಭದ್ರಕ ರೀತಿಯ ಸ್ತಂಭಗಳಿವೆ. ಅಂತರಾಳಕ್ಕೆ ಹೊಂದಿಕೊಂಡಂತೆ ಗೂಢಮಂಟಪವಿದೆ. ಮಧ್ಯದಲ್ಲಿ ನಾಲ್ಕು ಸ್ವತಂತ್ರ ಶ್ರೀಕಾರ ಸ್ತಂಭಗಳಿದ್ದು, ಪೀಠ, ಓಂ, ಕಾಂಡ ಮಾಲಾಸ್ಥಾನ, ಕುಂಭ, ಕಲಶ, ಲಕ ಮತ್ತು ಬೋದಿಗೆ ಭಾಗಗಳನ್ನು ಹೊಂದಿವೆ. ಇಕ್ಕೆಲದಲ್ಲಿ ಚತುಮುರ್ಖ ಬ್ರಹ್ಮ ಮತ್ತು ಪದ್ಮಾವತಿ ಶಿಲ್ಪಗಳಿವೆ. ಮಧ್ಯದಲ್ಲಿ ಪದ್ಮದ ಉಬ್ಬು ಅಲಂಕಾರವಿದೆ. ಸ್ತಂಭಗಳ ಪೀಠ ಭಾಗದಲ್ಲಿ ದರ್ಪಣ ಸುಂದರಿ, ನರ್ತಕಿ, ತಾಯಿ ಮತ್ತು ಮಗು, ಕೊಳಲು ನುಡಿಸುವ ಸ್ತ್ರೀಯ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ.
ಬ್ರಹ್ಮ ಜಿನಾಲಯದ ಬಾಹ್ಯ ವಾಸ್ತು:
ಜೈನ ದೇವಾಲಯವು ಕಪೋತಬಂಧ, ಅಧಿಷ್ಠಾನವನ್ನು ಹೊಂದಿದ್ದು, ಅದಕ್ಕೆ ಕ್ರಮವಾಗಿ ಖುರಕ, ಪದ್ಮ, ಅಂತರೀತ, ತ್ರಿಪಟ್ಟ ಕುಮುದ, ಅಂತರೀತ, ಕಪೋತ ಮತ್ತು ಮಕರಪಟ್ಟಿಕೆ ಭಾಗಗಳಿವೆ. ಮಕರ ಪಟ್ಟಿಕೆಯಲ್ಲಿ ಪ್ರಾಣಿಗಳ ಮತ್ತು ಕೀತಿರ್ಮುಖಗಳ ಅಲಂಕಾರವಿದೆ. ಕಪೋತದ ಮೇಲೆ ನಾಸಿಗಳ ಅಲಂಕಾರವಿದೆ. ಗರ್ಭಗೃಹದ ಮೇಲಿನ ಶಿಖರವು ಚತುಸ್ಥಲ ದ್ರಾವಿಡ ಮಾದರಿಯದ್ದಾಗಿದೆ. ಮೊದಲನೆಯ ಮಹಡಿಯಲ್ಲಿ ಹಾರವು ಕೂಟ, ಪಂಜರ, ಶಾಲಾಗಳಿಂದ ಕೂಡಿದೆ.
ಕಪೋತದ ಮೇಲೆ ವೇದಿಕೆ ಇದೆ. ಕೂಟ ಮತ್ತು ಪಂಜರಗಳಲ್ಲಿ ಕೀತಿರ್ಮುಖಗಳ ಅಲಂಕಾರವಿದೆ. ಶಾಲಾದಲ್ಲಿ ಜಿನಬಿಂಬಗಳನ್ನು ಮತ್ತು ಶಿವ, ಸೂರ್ಯನ ಶಿಲ್ಪಗಳನ್ನು ಕೆತ್ತಲಾಗಿದೆ. 2 ಮತ್ತು 3ನೇ ಮಹಡಿಗಳಲ್ಲಿಯೂ ಇದೇ ರೀತಿಯ ಹಾರದ ಅಲಂಕಾರವಿದೆ. ಅದರ ಮೇಲೆ ಕಪೋತವಿದೆ. ಮೇಲ್ಬಾಗದಲ್ಲಿ ಕಲಶವಿದೆ. ಶಿಖರದ ಮುಂಭಾಗದಲ್ಲಿಯ ಶುಕನಾಸಿಯು ಗವಾದ ಅಲಂಕಾರದಿಂದ ಕೂಡಿದ್ದು ಮಧ್ಯದಲ್ಲಿ ಶಿಲ್ಪವಿಲ್ಲ. ಅದರ ಮೇಲೆ ಕೀತಿರ್ ಮುಖವಿದೆ.
ಐತಿಹಾಸಿಕ ಲಕ್ಕುಂಡಿ ಇತಿಹಾಸವನ್ನು ದೇಶಕ್ಕೆ ಪರಿಚಯಿಸಬೇಕೆಂಬ ಮಹದಾಸೆಯೊಂದಿಗೆ ಸಚಿವರಾದ ಎಚ್.ಕೆ. ಪಾಟೀಲ ಅವರು ವಿಶೇಷ ಆಸಕ್ತಿ ವಹಿಸಿ ಇಲ್ಲಿನ 13 ಸ್ಮಾರಕಗಳ ಜೀರ್ಣೋದ್ಧಾರಕ್ಕಾಗಿ 5 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈಗ ಜೀರ್ಣೋದ್ಧಾರ ಕಾಮಗಾರಿಗೆ ಪ್ರಗತಿಯಲ್ಲಿದೆ. ಲಕ್ಕುಂಡಿ ಭಾಗದಲ್ಲಿ ಅನ್ವೇಷಣೆ ಮಾಡಿದಷ್ಟು ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ. ಆದರೆ ಹಲವು ವರ್ಷಗಳಿಂದ ಈ ಭಾಗದಲ್ಲಿ ಅನ್ವೇಷಣೆ ಮತ್ತು ಜೀರ್ಣೋದ್ಧಾರ ನಡೆದಿರಲಿಲ್ಲ. ಈಗ ಇಂತಹ ಅಭಿವೃದ್ಧಿಗೆ ಶುಕ್ರದೆಸೆ ಕೂಡಿಬಂದಿದ್ದು, ಲಕ್ಕುಂಡಿ ಗ್ರಾಮಕ್ಕೆ ಕಲಸ ಪ್ರಾಯವಾಗಿದೆ. ಪ್ರವಾಸಿಗಿರಿಂದ ಲಕ್ಕುಂಡಿಯ ಆಥಿರ್ಕ ಸಂಪನ್ಮೂಲದ ಪ್ರಗತಿ ಸಾಧಿಸಲಿದೆ ಅಂತಿದ್ದಾರೆ ಲಕ್ಕುಂಡಿ ಪ್ರಾಧಿಕಾರದ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ.
ಲಕ್ಕುಂಡಿ ಗ್ರಾಮದಲ್ಲಿ 16 ಜೈನ ಬಸದಿಗಳು, 5 ವೈಷ್ಣವ ದೇವಾಲಯಗಳು, 1 ಬೌದ್ಧ ಮಂದಿರ, 101 ದೇವಸ್ಥಾನ, 101 ಈಶ್ವರ ಲಿಂಗಗಳು, 101 ಬಾವಿಗಳು ಹಾಗೂ 22 ವೀರಶೈವ ಲಿಂಗಾಯತ ಮಠಗಳಿದ್ದವು ಎಂಬುದಾಗಿ ಶಿಲಾಶಾಸನಗಳಿಂದ ತಿಳಿದು ಬಂದಿದೆ. ಇತಿಹಾಸದ ಶಿಲೆಗಳ ಪತ್ತೆಗೆ ವಿಶೇಷ ಯೋಜನೆ ರೂಪಿಸುವಲ್ಲಿ ನಿರತರಾಗಿದ್ದಾರೆ. ಈ ನಡುವೆ ದೆಹಲಿಯ ಗಣರಾಜ್ಯೋತ್ಸವ ಪರೇಡ್ ಗೆ ಬ್ರಹ್ಮ ಜಿನಾಲಯ ಸ್ತಬ್ಧ ಚಿತ್ರಆಯ್ಕೆ ಆಗಿರುವುದು ಲಕ್ಕುಂಡಿಗೆ ಹಿರಿಮೆ ತಂದಿದೆ ಅಂತಿದ್ದಾರೆ, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೊಗೇರಿ.