ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುವ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಲ್ಯಾಬ್ ಶುಲ್ಕ ವಿಧಿಸದಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈ ವಿಚಾರವನ್ನು ಉಪ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಈವರೆಗೆ ವಿಧಿಸುತ್ತಿದ್ದ ಶೇ. 50ರಷ್ಟು ಲ್ಯಾಬ್ ಶುಲ್ಕವನ್ನು ವಿಧಿಸಬಾರದು ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯಾದ್ಯಂತ ಇರುವ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿ ಬರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡುದಾರ ರೋಗಿಗಳಿಗೆ ಈವರೆಗೆ ಶೇ. 50ರಷ್ಟು ಲ್ಯಾಬ್ ಶುಲ್ಕ ವಿಧಿಸುತ್ತಿತ್ತು. ಆದರೆ ಬಡ ರೋಗಿಗಳ ಪರಿಸ್ಥಿತಿ ಮನಗಂಡು ಆ ಶುಲ್ಕವನ್ನು ವಿಧಿಸಬಾರದೆಂಬ ಆದೇಶ ನೀಡಲಾಗಿದೆ. ನಮ್ಮದು ಸದಾ ಬಡವರ, ರೈತರ, ಕಾರ್ಮಿಕರ ಪರವಾದ ಸರ್ಕಾರ ಎಂದು ಅಶ್ವಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ ಏಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 10 ಸ್ವಾಯತ್ತ ಕಾಲೇಜು ಸೇರಿ 17 ವೈದ್ಯಕೀಯ ಕಾಲೇಜುಗಳಿವೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಅನೇಕರಿಗೆ ಅನುಕೂಲವಾಗಿದೆ.
ಕರ್ನಾಟಕ ರಾಜ್ಯಾದ್ಯಂತ ಇರುವ ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಸರಕಾರಿ ಆಸ್ಪತ್ರೆಗಳಲ್ಲಿ ಬಿ.ಪಿ.ಎಲ್. ಕಾರ್ಡುದಾರ ರೋಗಿಗಳಿಗೆ ಈವರೆಗೆ ಶೇ. 50 ರಷ್ಟು ಲ್ಯಾಬ್ ಶುಲ್ಕ ವಿಧಿಸುತ್ತಿದ್ದು, ಬಡ ರೋಗಿಗಳ ಪರಿಸ್ಥಿತಿ ಮನಗಂಡು ಆ ಶುಲ್ಕವನ್ನು ವಿಧಿಸಬಾರದೆಂಬ ಆದೇಶ ನೀಡಲಾಗಿದೆ. ನಮ್ಮದು ಸದಾ ಬಡವರ, ರೈತರ, ಕಾರ್ಮಿಕರ ಪರವಾದ ಸರಕಾರ.
— Dr. Ashwathnarayan C. N. (@drashwathcn) October 13, 2019