ಮುಂಬೈ: ನಗರದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್)ನ ಹೈಡ್ರೊಕ್ರಾಕರ್ ಸಂಸ್ಕರಣಾ ಘಟಕದಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 43 ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ಚೆಂಬೂರ್‍ನ ಮಹಲ್ ಗಾಂವ್‍ನಲ್ಲಿರುವ ಬಿಪಿಸಿಎಲ್ ಘಟಕದ ಕಂಪ್ರೆಸರ್ ಶೆಡ್‍ನಲ್ಲಿ ಬುಧವಾರ ಮಧ್ಯಾಹ್ನ 2.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಭಾರೀ ಪ್ರಮಾಣದ ಬೆಂಕಿ ಸಹಿತ ಹೊಗೆ ನಗರದಲ್ಲಿ ದಟ್ಟವಾಗಿ ಆವರಿಸಿಕೊಂಡಿತ್ತು.
ಮಾಹಿತಿ ಪಡೆದು ತಕ್ಷಣವೇ ಸ್ಥಳಕ್ಕೆ ಒಂಬತ್ತು ಅಗ್ನಿಶಾಮಕ ವಾಹನಗಳು ಬಂದಿದ್ದು, ರಾತ್ರಿಯವರೆಗೆ ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿತ್ತು. ಬೆಂಕಿ ಉಳಿದ ಘಟಕಗಳಿಗೆ ತಗುಲದಂತೆ ಎಚ್ಚರಿಕೆ ವಹಿಸಲಾಗಿದೆ.
#Maharashtra: Level- III fire breaks out at Bharat Petroleum Corporation Limited-RMP plant in Chembur; 9 fire tenders, 2 foam tenders and 2 jumbo tankers present at the spot. pic.twitter.com/g7hY7xqeE1
— ANI (@ANI) August 8, 2018
ಬಾಕಿ ಉಳಿದ 1.20 ಲಕ್ಷ ಬ್ಯಾರಲ್ ಉತ್ಪಾದನಾ ಸಾಮಥ್ರ್ಯದ ಘಟಕಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಶುದ್ಧೀಕರಣ ಘಟಕದ ಮುಖ್ಯಸ್ಥ ಆರ್.ರಾಮಚಂದ್ರನ್ ಹೇಳಿದ್ದಾರೆ. ಸದ್ಯ ಬೆಂಕಿ ಕಾಣಿಸಿಕೊಂಡ ಘಟಕವನ್ನು ಮುಚ್ಚಲಾಗಿದ್ದು, ಇನ್ನೆಷ್ಟು ದಿನ ಇದರಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬುದನ್ನು ಗುರುವಾರ ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ.
ಅಗ್ನಿ ಅವಘಡದಲ್ಲಿ ಸಿಕ್ಕಿದ್ದ 43 ಜನ ಕಾರ್ಮಿಕರ ಪೈಕಿ 22 ಮಂದಿಗೆ ಬಿಪಿಸಿಎಲ್ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಉಳಿದ 21 ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆಂಬೂರ್ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ರಾಮಚಂದ್ರನ್ ಹೇಳಿದ್ದಾರೆ.