– ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪೋರಿಯರು
ಚಿಕ್ಕಮಗಳೂರು: ಕುಸ್ತಿಯನ್ನ ನೋಡೋದೇ ಒಂದು ಕುತೂಹಲ. ಕುಸ್ತಿಯಲ್ಲಿ ಬಾಲಕ-ಬಾಲಕಿಯರು ತೊಡೆ ತಟ್ಟಿ ನಿಂತರೆ ನೋಡುಗರ ಮೈ ಝುಮ್ ಅನ್ನಿಸದೆ ಇರಲಾರದು. ಮೂರು ದಿನಗಳ ಕಾಲ ಕಾಫಿನಾಡಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನೋಡಗರ ಮೈ ರೋಮಾಂಚನಗೊಳಿಸಿದೆ. ಪ್ರಶಸ್ತಿಗಾಗಿ ಪೋರ-ಪೋರಿಯರ ಬಲಾಬಲ ನೋಡಿದವರು ವಾಹ್ ಅಂತ ಉದ್ಗಾರ ತೆಗೆಯುತ್ತಿದ್ದರು.
Advertisement
ಹೌದು. ಇಂಥದ್ದೊಂದು ರೋಮಾಂಚನಕಾರಿ ಸನ್ನಿವೇಶಕ್ಕೆ ಕಾಫಿನಾಡು ಚಿಕ್ಕಮಗಳೂರಿನ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಸಾಕ್ಷಿಯಾಯಿತು. ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನ ಏರ್ಪಡಿಸಿತ್ತು. ರಾಜ್ಯದ 24 ಜಿಲ್ಲೆಗಳಿಂದ ಸುಮಾರು 849 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
Advertisement
Advertisement
ಸುಮಾರು 14 ರಿಂದ 17ನೇ ವಯಸ್ಸಿನ ಬಾಲಕ-ಬಾಲಕಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ಹತ್ತಾರು ಬಾಲಕ-ಬಾಲಕಿಯರು ಪ್ರಶಸ್ತಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕುಸ್ತಿ ಪಂದ್ಯಾಟ ಶನಿವಾರ ಸಂಜೆ ವೇಳೆ ಸಂಪನ್ನಗೊಂಡಿತು. ಇದಕ್ಕೂ ಮುಂಚೆ ಕುಸ್ತಿಪಟುಗಳ ಹಣಾಹಣಿಯಂತು ರೋಮಾಂಚನವಾಗಿತ್ತು. ಬಾಲಕಿಯರು ಕೂಡ ನಾವ್ ಏನೂ ಕಮ್ಮಿ ಇಲ್ಲ ಅಂತ ತೊಡೆ ತಟ್ಟಿ ಶಕ್ತಿ ಪ್ರದರ್ಶನ ತೋರಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಬೀಗಿದರು.
Advertisement
45 ರಿಂದ 110 ಕೆ.ಜಿವರೆಗಿನ ನಾನಾ ವಿಭಾಗದಲ್ಲಿ ಪೈಲ್ವಾನರು ಅಖಾಡದಲ್ಲಿ ತಮ್ಮ ತಾಕತ್ತನ್ನ ಪ್ರದರ್ಶನ ಮಾಡಿದರು. ಮಲೆನಾಡಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ 24 ಜಿಲ್ಲೆಗಳಿಂದ ಕುಸ್ತಿಪಟುಗಳು ಭಾಗಿವಹಿಸಿದ್ದು ಕ್ರೀಡಾಕೂಟದ ಯಶಸ್ಸಿಗೆ ಕಾರಣವಾಯ್ತು. ಪಂದ್ಯದಲ್ಲಿ ಭಾಗಿಯಾದ ಕ್ರೀಡಾಪಟುಗಳು ಈ ಪಂದ್ಯಾವಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಕುಸ್ತಿಯನ್ನು ನೋಡಿದ ಪ್ರೇಕ್ಷಕರು ಕೂಡ ಸಂತಸ ವ್ಯಕ್ತಪಡಿಸಿದರು. ಕುಸ್ತಿ ಪಂದ್ಯಾವಳಿ ನೋಡಿದ ಸ್ಥಳೀಯರು ಸಖತ್ ಎಂಜಾಯ್ ಮಾಡಿದರು. ಕಾಫಿನಾಡಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿ ಸೈ ಎನ್ನಿಸಿಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಿಕ್ಕಮಗಳೂರಿಗೆ ಪ್ರಶಸ್ತಿ ಬರಲಿಲ್ಲವಾದರೂ ಆಯೋಜನೆ ಮಾಡಿ ಅಚ್ಚುಕಟ್ಟಾಗಿ ನಡೆಸಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು.
ಇದೇ ಮೊದಲ ಬಾರಿಗೆ ಕಾಫಿನಾಡಲ್ಲಿ ಕುಸ್ತಿ ಪ್ರದರ್ಶನ ನಡೆದಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಚಿಕ್ಕಮಗಳೂರಿನ ಮಕ್ಕಳು ಕೂಡ ಭಾಗವಹಿಸಿ ಕುಸ್ತಿಯ ಮಸ್ತಿಯನ್ನ ಖುಷಿ ಖುಷಿಯಾಗಿಯೇ ಎಂಜಾಯ್ ಮಾಡಿದರು. ಬಹುತೇಕ ಪ್ರಶಸ್ತಿಗಳು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪಾಲಾಗಿದ್ದು, ಆ ಭಾಗದಲ್ಲಿ ಕುಸ್ತಿಗೆ ಹೆಚ್ಚು ಒತ್ತು ಕೊಡ್ತಿರೋದು ಮತ್ತೊಮ್ಮೆ ಸಾಬೀತಾಯಿತು.