ರಾಮನಗರ: ಮರ್ಯಾದೆಗೆ ಅಂಜಿ ಪತಿ-ಪತ್ನಿ ನೇಣಿಗೆ ಶರಣು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ಕಾರಣನಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದು, ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದ ದಂಪತಿ ಲೋಕೇಶ್ ಹಾಗೂ ಕೌಸಲ್ಯ ಆತ್ಮಹತ್ಯೆಗೆ ಶರಣಾಗಿದ್ದರು. ಕೌಸಲ್ಯ ಜೊತೆಗಿದ್ದ ಫೋಟೋಗಳನ್ನು ಆರೋಪಿ ತ್ಯಾಗರಾಜ್ ಆಕೆಯ ಪತಿಗೆ ಕಳುಹಿಸಿದ್ದನು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ತ್ಯಾಗರಾಜ್ ಕಾರಣವೆಂದು ಅವರ ಮನೆಗೆ ಬೆಂಕಿ ಹಚ್ಚಿದ್ದರು.
ಈ ವಿಷಯ ತಿಳಿದ ಪೊಲೀಸರು ಪರಾರಿಯಾಗಿದ್ದ ತ್ಯಾಗರಾಜ್‍ಗಾಗಿ ಬಲೆ ಬೀಸಿದ್ದರು. ಈ ಬೆನ್ನಲ್ಲೆ ಆರೋಪಿ ತ್ಯಾಗರಾಜ್ ಮೈಸೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ್ದಾನೆ. ತ್ಯಾಗರಾಜ್ ಈಗ ಮೈಸೂರಿನ ಕೊಲಂಬಿಯಾ- ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದಂಪತಿಗಳ ಆತ್ಮಹತ್ಯೆಗೆ ಕಾರಣನಾದ ತ್ಯಾಗರಾಜ್ ಬಂಧನಕ್ಕೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಏನಿದು ಪ್ರಕರಣ?
ಸೋಮವಾರದಂದು ಕೌಸಲ್ಯ, ತ್ಯಾಗರಾಜ್‍ನೊಂದಿಗೆ ಮನೆಬಿಟ್ಟು ತೆರಳಿದ್ದಳು. ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಮಾಹಿತಿ ಲಭಿಸಿತ್ತು. ಆದರೆ ಮಂಗಳವಾರ ಕೌಸಲ್ಯ ಮತ್ತೆ ಮನೆಗೆ ಹಿಂದಿರುಗಿದ್ದರು. ಈ ವೇಳೆ ಕೌಸಲ್ಯ ತನ್ನೊಂದಿಗೆ ಇರುವ ಫೋಟೋಗಳನ್ನು ತ್ಯಾಗರಾಜ್ ಆಕೆಯ ಪತಿಗೆ ಕಳುಹಿಸಿದ್ದ. ಫೋಟೋದಲ್ಲಿ ತ್ಯಾಗರಾಜ್, ಕೌಸಲ್ಯಗೆ ಮುತ್ತು ಕೊಡುತ್ತಿರುವ ದೃಶ್ಯ ಇದ್ದು, ಇದರಿಂದ ಪತಿ ಲೋಕೇಶ್ ಫೋಟೋ ನೋಡಿ ಸಾಕಷ್ಟು ನೊಂದಿದ್ದ. ಅಲ್ಲದೇ ಈ ಫೋಟೋ ವಿಚಾರವಾಗಿಯೇ ದಂಪತಿ ನಡುವೆ ಜಗಳ ಕೂಡ ನಡೆದಿತ್ತು.
ಜಗಳ ಬಳಿಕ ದಂಪತಿ ಒಂದೇ ಹಗ್ಗಕ್ಕೆ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಇತ್ತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳುತ್ತಿದಂತೆ ಗ್ರಾಮಸ್ಥರು ಘಟನೆಗೆ ತ್ಯಾಗರಾಜ್‍ನೇ ಕಾರಣ ಎಂದು ಆತನ ಮನೆಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದರು. ಅಲ್ಲದೇ ತ್ಯಾಗರಾಜಗೆ ಸೇರಿದ್ದ ಒಂದು ಟ್ರ್ಯಾಕ್ಟರ್, ಎರಡು ಕಾರು ಹಾಗೂ ಮನೆಗೆ ಬೆಂಕಿ ಇಟ್ಟಿದ್ದರು.