ದಕ್ಷಿಣದ ಖ್ಯಾತತಾರೆ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಕಾಂಬಿನೇಷನ್ ನ ತೆಲುಗು ಸಿನಿಮಾ ‘ವಿರಾಟ ಪರ್ವಂ’ ಇಂದು ಬಿಡುಗಡೆ ಆಗಿದೆ. ಇದೊಂದು ನಕ್ಸಲ್ ಹಿನ್ನೆಲೆಯಾಗಿಟ್ಟುಕೊಂಡು ಮಾಡಿರುವ ಸಿನಿಮಾ. ನಕ್ಸಲ್ ಹೋರಾಟದಲ್ಲಿ ಭಾಗಿಯಾದ ಇಬ್ಬರು ಪ್ರೇಮಿಗಳ ಕಥನ ಮತ್ತು ಶೋಷಿತ ಸಮಾಜಕ್ಕಾಗಿ ಅವರು ಮಾಡುವ ತ್ಯಾಗವನ್ನು ತೋರಿಸುವ ಚಿತ್ರ ಇದಾಗಿದ್ದು, ಈ ಸಿನಿಮಾವನ್ನು ಬೈಕಾಟ್ ಮಾಡುವುದಾಗಿ ಹಿಂದೂಪರ ಸಂಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿವೆ.
ಈ ಸಿನಿಮಾ ಬೈಕಾಟ್ ಮಾಡುವುದಕ್ಕೆ ಕಾರಣ, ಸಿನಿಮಾದ ಕಂಟೆಂಟ್ ಅಲ್ಲ. ಬದಲಿಗೆ ಈ ಚಿತ್ರದಲ್ಲಿ ನಟಿಸಿದ ನಾಯಕಿ ಸಾಯಿ ಪಲ್ಲವಿ ಅವರ ಹೇಳಿಕೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಅವರು ಮಾತನಾಡುತ್ತಾ, ‘ಕಾಶ್ಮೀರದಲ್ಲಿ ನಡೆದ ಪಂಡಿತರ ನರಮೇಧ ಮತ್ತು ಲಾಕ್‌ಡೌನ್ ವೇಳೆಯಲ್ಲಿ ಗೋವನ್ನು ತಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಜೈ ಶ್ರೀರಾಮ್ ಎಂದು ಕೂಗುತ್ತಾ ಮಾಡಿದ ಹತ್ಯೆ ಎರಡೂ ಒಂದೇ. ಧರ್ಮದ ಹೆಸರಿನಲ್ಲಿ ಮಾಡುವ ಹತ್ಯೆಯನ್ನು ಸಹಿಸಿಕೊಳ್ಳಬಾರದು’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಸಿನಿಮಾ ಬೈಕಾಟ್‌ಗೆ ಕಾರಣವಾಗಿದೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್
ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಇವರ ಮಾತಿಗೆ ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.