ಚಿಕ್ಕಬಳ್ಳಾಪುರ: ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋದ ಯುವಕನೊರ್ವ ನೀರುಪಾಲಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಎನ್ ಗುಂಡ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ನರೇಶ್(18) ಮೃತ ದುರ್ದೈವಿ. ವರ್ಷದ ಕೊನೆ ದಿನ ಎಂದು ನರೇಶ್ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಈಜಲು ತೆರಳಿದ್ದ. ಆದರೆ ಕೆರೆಯಲ್ಲಿ ಈಜಾಡುತ್ತಿದ್ದ ವೇಳೆ ನರೇಶ್ ನೀರಿನಲ್ಲಿ ಮುಳುಗಿ ಮರೆಯಾಗಿದ್ದಾನೆ. ಈ ವೇಳೆ ಗ್ರಾಮಕ್ಕೆ ಬಂದ ಉಳಿದ ಮೂವರು ಸ್ನೇಹಿತರು ನರೇಶ್ ಕೆರೆಯಲ್ಲಿ ಮುಳುಗಿ ಕಾಣೆಯಾದ ಬಗ್ಗೆ ಆತಂಕಗೊಂಡು ವಿಷಯವನ್ನು ಯಾರಿಗೂ ತಿಳಿಸಿಲ್ಲ.
ಕೊನೆಗೆ ನರೇಶ್ ನಾಪತ್ತೆಯಾಗಿದ್ದಾನೆ ಎಂದು ಫೋಷಕರು ಹುಡುಕಾಟ ನಡೆಸುತ್ತಿದ್ದಾಗ ನರೇಶ್ ಕೆರೆಯಲ್ಲಿ ಮುಳುಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇಂದು ಬೆಳಿಗ್ಗೆ ಗ್ರಾಮಸ್ಥರು ತೆಪ್ಪಗಳ ಮೂಲಕ ಕೆರೆಯಲ್ಲಿ ಶೋಧ ನಡೆಸಿ ನರೇಶ್ ಮೃತದೇಹವನ್ನು ಹೊರತೆಗೆದಿದ್ದಾರೆ.
ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.