ಭೋಪಾಲ್: ಬಾಲಕನೊಬ್ಬನನ್ನು ಶಾಲೆಯಿಂದ ಕಿಡ್ನಾಪ್ ಮಾಡಿ, ಶೂ ಲೇಸ್‍ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಎರಡನೇ ತರಗತಿಯಲ್ಲಿ ಓದುತ್ತಿದ್ದ ಭರತ್ ಮೃತ ಬಾಲಕ. ಶಾಲೆಯಿಂದ ಸುಮಾರು 13 ಕಿ.ಮೀ ದೂರದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯೂಷನ್ ಶಿಕ್ಷಕ ವಿಶಾಲ್ ರೂಪಾನಿ (ಬಿಟ್ಟೂ)ನನ್ನು ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಶಾಲೆ ಮುಗಿದು ಎಷ್ಟು ಹೊತ್ತಾದ್ರೂ ಮಗ ಮನೆಗೆ ಬರದ ಹಿನ್ನೆಲೆಯಲ್ಲಿ ಭರತ್ ತಂದೆ ಪರಶುರಾಮ್ ಎಲ್ಲಾ ಕಡೆ ಹುಡುಕಾಡಿ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಗ ಸುರಕ್ಷಿತವಾಗಿ ಮನೆಗೆ ವಾಪಸ್ ಬರುತ್ತಾನೆ ಎಂದುಕೊಂಡಿದ್ದ ತಂದೆಗೆ, ಭರತ್ ಹೆಣ ಗೋಣಿಚೀಲದಲ್ಲಿ ಸಿಕ್ಕಿದೆ ಎಂದು ಗೊತ್ತಾಗಿ ಶಾಕ್ ಆಗಿತ್ತು. ಬಾಲಕನನ್ನು ಆತನ ಶೂ ಲೇಸ್‍ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು. ಆತನ ಬ್ಯಾಗ್ ಮತ್ತು ಶೂ ಕೂಡ ಗೋಣಿಚೀಲದಲ್ಲೇ ತುಂಬಲಾಗಿತ್ತು. ಪೊಲೀಸರು ಗೋಣಿಚೀಲದಿಂದ ಶವವನ್ನು ಹೊರತೆಗೆದಾಗ ಶೂ ಲೇಸ್ ಬಾಲಕನ ಕುತ್ತಿಗೆಯಲ್ಲಿತ್ತು. ಪೊಲೀಸರು ಕೂಡ ಶೂ ಲೇಸನ್ನು ತೆಗೆಯಲು ಸಾಧ್ಯವಾಗದಂತೆ ತುಂಬಾ ಬಿಗಿಯಾಗಿ ಕಟ್ಟಲಾಗಿತ್ತು. ಕೊಲೆ ಮಾಡಿದ ನಂತರ ಆರೋಪಿ ಮೃತದೇಹವನ್ನು ಗೋಣಿಚೀಲದೊಳಗೆ ತುಂಬಿ ಹೊಲಿಗೆ ಹಾಕಿದ್ದ.
ಬೈಕ್‍ನಲ್ಲಿ ಬಂದ ವ್ಯಕ್ತಿಯೊಬ್ಬ ಗೋಣಿ ಚೀಲ ಎಸೆದು ಹೋಗಿದ್ದನ್ನು ನೋಡಿದೆ. ಆದ್ರೆ ಹೆಚ್ಚೇನೂ ತಲೆಕೆಡಿಸಿಕೊಳ್ಳಲಿಲ್ಲ. ಅನಂತರ ನಾನು ಮನೆಗೆ ಹೋದೆ. ಸಂಜೆ ಸುಮಾರು 6.30ರ ಹೊತ್ತಿಗೆ ಇಬ್ಬರು ಹುಡುಗರು ಬ್ಯಾಗ್ ತೆರೆದು ನೋಡಿ ಕಿರುಚಿಕೊಂಡ್ರು. ನಾನು ಏನಾಗಿದೆ ಎಂದು ನೋಡಲು ಅಲ್ಲಿಗೆ ಹೋದಾಗ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನ ಶವ ನೋಡಿದೆ ಎಂದು ಇಲ್ಲಿನ ನಿವಾಸಿ ಭೈರೋನ್ ಕುಶ್ವಾಹ್ ಹೇಳಿದ್ದಾರೆ.
ಟ್ಯೂಷನ್ ಶಿಕ್ಷಕ ಬಿಟ್ಟೂ ನನ್ನನ್ನು ಇಷ್ಟಪಡುತ್ತಿದ್ದ. ಮಗ ಭರತ್‍ನನ್ನು ಆತನೇ ಕೊಲೆ ಮಾಡಿದ್ದಾನೆಂದು ತಾಯಿ ಸವಿತಾ ಹೇಳಿದ್ದಾರೆ. ನೀನು ನಿನ್ನ ಗಂಡನನ್ನು ಬಿಟ್ಟು ಬಂದು ನನ್ನ ಜೊತೆ ಜೀವನ ನಡೆಸಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೊಲೆಗೆ ಎರಡು ದಿನಗಳ ಮುಂಚೆ ಬಿಟ್ಟೂ ಬೆದರಿಕೆ ಹಾಕಿದ್ದ ಎಂದು ಸವಿತಾ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಟ್ಯೂಷನ್ ಶಿಕ್ಷಕನ ವಿರುದ್ಧ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂದು ಬಾಲಕನ ತಂದೆ ಪರಶುರಾಮ್ ಹೇಳಿದ್ದಾರೆ. ಟ್ಯೂಷನ್ ಶಿಕ್ಷಕನ ಬಗ್ಗೆ ಕೆಲವು ಅನುಮಾನಾಸ್ಪದ ಮಾಹಿತಿ ತಿಳಿದ ನಂತರ ಆತನಿಗೆ ಟ್ಯೂಷನ್ ಮಾಡಲು ಮನೆಗೆ ಬರುವುದು ಬೇಡ ಎಂದು ಹೇಳಿದ್ದೆವು. ಆದ್ರೂ ಆತ ಒಂದು ದಿನ ನಸುಕಿನ ಜಾವ 3 ಗಂಟೆ ವೇಳೆ ಮನೆಗೆ ನುಗ್ಗಿದ್ದ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆಗ ನನ್ನ ಹೆಂಡತಿಯನ್ನ ಕಿಡ್ನಾಪ್ ಮಾಡಿ ಕುಟುಂಬವನ್ನ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರು ಆಗಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪರಶುರಾಮ್ ಹೇಳಿದ್ದಾರೆ.
ಸದ್ಯ ಆರೋಪಿಯನ್ನ ಬಂಧಿಸಿರೋ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.