ಜೈಪುರ: ಮಗನೊಬ್ಬ 12 ವರ್ಷದಿಂದ ನಾಣ್ಯಗಳನ್ನು ಸಂಗ್ರಹ ಮಾಡಿ 13,500 ರೂ. ಜೋಡಿಸಿ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ ಅಪರೂಪದ ಘಟನೆಯೊಂದು ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ.
17 ವರ್ಷದ ರಾಮ್ ಸಿಂಗ್ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸಿದ್ದಾನೆ. ರಾಮ್ 13,500 ರೂ. ಸಂಗ್ರಹಿಸಿದ್ದು, ಅದು ಒಟ್ಟು 35 ಕೆ.ಜಿ ಇತ್ತು. ಈ ನಾಣ್ಯಗಳಿಂದ ರಾಮ್ ತನ್ನ ತಾಯಿಗಾಗಿ ಫ್ರಿಡ್ಜ್ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ.
Advertisement
Advertisement
ರಾಮ್ ಮನೆಯಲ್ಲಿದ್ದ ಫ್ರಿಡ್ಜ್ ತುಂಬಾ ಹಳೆಯದಾಗಿತ್ತು. ಅಲ್ಲದೆ ಆತನ ತಾಯಿ ಹೊಸ ಫ್ರಿಡ್ಜ್ ಖರೀದಿಸಬೇಕು ಎಂದು ಪದೇಪದೇ ಹೇಳುತ್ತಿದ್ದರು. ಇದನ್ನು ತಿಳಿದ ರಾಮ್, ತನ್ನ ತಾಯಿಗೆ ಫ್ರಿಡ್ಜ್ ನೀಡಲು ನಿರ್ಧರಿಸಿದ್ದನು. ಇದೇ ವೇಳೆ ಪತ್ರಿಕೆಯಲ್ಲಿ ಜಾಹೀರಾತು ನೋಡಿದ ರಾಮ್, ಶೋರೂಮಿಗೆ ಕರೆ ಮಾಡಿ ನನ್ನ ತಾಯಿಯ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ನೀಡಬೇಕೆಂದು ನಿರ್ಧರಿಸಿದ್ದೇನೆ. ಆದರೆ ನಾನು ಹಣವನ್ನು ನಾಣ್ಯದ ರೂಪದಲ್ಲಿ ನೀಡುತ್ತೇನೆ ಎಂದು ಹೇಳಿದ್ದಾನೆ. ಶೋರೂಂ ಮಾಲೀಕ ಹರಿಕಿಶಿನ್ ಈ ಬಗ್ಗೆ ಚರ್ಚಿಸಿ ನಂತರ ಒಪ್ಪಿಕೊಂಡಿದ್ದಾರೆ.
Advertisement
Advertisement
ಮಾಲೀಕ ಒಪ್ಪಿಗೆ ನೀಡುತ್ತಿದ್ದಂತೆ ರಾಮ್ 35 ಕೆಜಿಯಿದ್ದ ನಾಣ್ಯದ ಬ್ಯಾಗನ್ನು ಶೋರೂಮಿಗೆ ತೆಗೆದುಕೊಂಡು ಹೋಗಿದ್ದಾನೆ. ಬ್ಯಾಗಿನಲ್ಲಿ ಒಂದು, ಎರಡು, ಐದು ಹಾಗೂ ಹತ್ತು ರೂ. ನಾಣ್ಯಗಳಿದ್ದು, ಇದನ್ನು ಎಣಿಸಲು 4 ಗಂಟೆ ಬೇಕಾಯಿತು. ಶಿವಶಕ್ತಿನಗರದ ಎಲೆಕ್ಟ್ರಾನಿಕ್ಸ್ ಶೋರೂಮಿನ ಮಾಲೀಕ ಹಣವನ್ನು ಎಣಿಸಿದಾಗ ಅದರಲ್ಲಿ 2 ಸಾವಿರ ರೂ. ಕಡಿಮೆ ಇತ್ತು. ಬಳಿಕ ರಾಮ್ ಭಾವನೆಯನ್ನು ತಿಳಿದ ಮಾಲೀಕ 2 ಸಾವಿರ ರೂ.ಯ ಡಿಸ್ಕೌಂಟ್ ಹಾಗೂ ಒಂದು ಉಡುಗೊರೆಯನ್ನು ನೀಡಿದ್ದಾರೆ.
ಬಾಲ್ಯದಿಂದಲೂ ರಾಮ್ ಸಿಂಗ್‍ಗೆ ಹುಂಡಿಯಲ್ಲಿ ಹಣ ಸಂಗ್ರಹಿಸುವ ಆಸಕ್ತಿ ಇತ್ತು. ಹುಂಡಿ ತುಂಬುತ್ತಿದ್ದಂತೆ ರಾಮ್ ಅದರಲ್ಲಿದ್ದ ನೋಟು ತೆಗೆದು ತನ್ನ ತಾಯಿ ಪಪ್ಪುದೇವಿಗೆ ನೀಡುತ್ತಿದ್ದನು ಹಾಗೂ ನಾಣ್ಯಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದನು. ರಾಮ್ 12 ವರ್ಷದಿಂದ ಈ ರೀತಿ ಮಾಡುತ್ತಿರುವುದರಿಂದ 13,500 ಹಣ ಸಂಗ್ರಹಿಸಿದ್ದಾನೆ. ರಾಮ್ ತನಗೆ ಫ್ರಿಡ್ಜ್ ಉಡುಗೊರೆಯನ್ನಾಗಿ ನೀಡಿದ್ದನ್ನು ನೋಡಿದ ತಾಯಿ ಖುಷಿ ಆಗಿದ್ದಾರೆ. ಅಲ್ಲದೆ ದೇವರು ಎಲ್ಲರಿಗೂ ಇಂತಹ ಮಗ ನೀಡಲಿ ಎಂದು ಹೇಳಿದ್ದಾರೆ.