ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಕ್ಕೆ ಯುವಕನೊಬ್ಬನನ್ನು ಅಪ್ರಾಪ್ತ ಬಾಲಕನೊಬ್ಬ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದ ಘಟನೆ ನವದೆಹಲಿಯ ಜಸೋಲಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ಅಮಿತ್ (28) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಅಮಿತ್ ಪಾರ್ಕ್ ಒಂದರಲ್ಲಿ ತನ್ನ ಫೋನ್‍ನಲ್ಲಿ ಜೋರಾಗಿ ಮಾತನಾಡುತ್ತಿದ್ದ. ಈ ವೇಳೆ ಸ್ಥಳದಲ್ಲಿದ್ದ ಬಾಲಕ ನಿಧಾನವಾಗಿ ಮಾತನಾಡಿ ತೊಂದರೆಯಾಗುತ್ತಿದೆ ಎಂದಿದ್ದಾನೆ. ಆದರೂ ಯುವಕ ಬಾಲಕನ ಮಾತು ಕೇಳದೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಲೇ ಇದ್ದ. ಆಗ ಮತ್ತೆ ಬಾಲಕ ಯುವಕನಿಗೆ ನಿಧಾನವಾಗಿ ಮಾತನಾಡಿ ಎಂದಿದಕ್ಕೆ ಕೋಪಗೊಂಡ ಯುವಕ ರೇಗಿದ್ದಾನೆ. ಬಳಿಕ ಅವರಿಬ್ಬರ ನಡುವೆ ಜಗಳವಾಗಿದೆ. ಇದರಿಂದ ಸಿಟ್ಟಿಗೆದ್ದ ಬಾಲಕ ಕೈಗೆ ಸಿಕ್ಕ ಕಲ್ಲಿನಿಂದ ಯುವಕನ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.
ಈ ಹಲ್ಲೆಯಿಂದ ಯುವಕನ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಸಾರ್ವಜನಿಕರು ಗಮನಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯದ್ದಿದ್ದಾರೆ. ಆದರೇ ಅಷ್ಟರಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಯುವಕನ ಜೊತೆ ಜಗಳವಾದಾಗ ಕೋಪದಿಂದ ಕಲ್ಲಿನಿಂದ ಆತನನ್ನು ಜಜ್ಜಿ ಸಾಯಿಸಿದೆ. ಬಳಿಕ ಭಯವಾಗಿ ಸ್ಥಳದಿಂದ ಓಡಿಹೋದೆ ಎಂದು ಬಾಲಕ ಹೇಳಿದ್ದಾನೆ.
ಇಬ್ಬರ ನಡುವೆ ವೈಯಕ್ತಿಕವಾಗಿ ಯಾವುದೇ ದ್ವೇಷವಿರಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಅಪ್ರಾಪ್ತ ಬಾಲಕನನ್ನು ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv