ಮಂಡ್ಯ: ಸಹಪಾಠಿಗಳು ಆಟವಾಡುತ್ತ ಬ್ಯಾಟಿನಿಂದ ಹೊಡೆದ ಕಲ್ಲು ಕಣ್ಣಿಗೆ ತಾಗಿ ವಿದ್ಯಾರ್ಥಿ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಮದ್ದೂರು ತಾಲೂಕಿನ ಭಾರತೀನಗರದಲ್ಲಿರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪವನ್‍ಕುಮಾರ್ ಕಣ್ಣು ಕಳೆದುಕೊಂಡ ವಿದ್ಯಾರ್ಥಿ. ವಸತಿ ನಿಲಯದ ಆವರಣದಲ್ಲಿ ಪವನ್ ಕುಮಾರ್ ಓದಿಕೊಳ್ಳುತ್ತಿದ್ದ. ಈ ವೇಳೆ ಪವನ್ ಕುಮಾರ್ ಸಹಪಾಠಿಗಳು ಆಟವಾಡಿ ಬ್ಯಾಟ್‍ನಿಂದ ಕಲ್ಲನ್ನು ಜೋರಾಗಿ ಹೊಡೆದಿದ್ದಾರೆ. ಇದರಿಂದ ವೇಗವಾಗಿ ಬಂದ ಕಲ್ಲು ಪವನ್ ಕುಮಾರ್ ಎಡಗಣ್ಣಿಗೆ ಬಡಿದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.
ಮಕ್ಕಳು ಕಲ್ಲನ್ನು ಬಾಲ್‍ನಂತೆ ಬಳಸಿ ಕ್ರಿಕೆಟ್ ಆಡುತ್ತಿದ್ದರು. ವಸತಿ ಶಾಲೆಯ ಶಿಕ್ಷಕರ ಬೇಜವಾಬ್ದಾರಿಯಿಂದಾಗಿ ನಮ್ಮ ಮಗ ಕಣ್ಣು ಕಳೆದುಕೊಂಡಿದ್ದಾನೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ನಿರ್ಲಕ್ಷ್ಯ ವಹಿಸಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಮಗನ ಭವಿಷ್ಯಕ್ಕೆ ಅನುಕೂಲವಾಗುವಂತೆ ಪರಿಹಾರ ನೀಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.