ಬೆಂಗಳೂರು: ಬೆಸ್ಕಾಂ ಹಾಗೂ ಪಾಲಿಕೆಯ ನಿರ್ಲಕ್ಷ್ಯಕ್ಕೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅವಘಡ ನಡೆದಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಮತ್ತೋರ್ವ ಬಾಲಕ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಲಿಖಿತ್(14) ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ವಿದ್ಯುತ್ ಸ್ಪರ್ಶದಿಂದ ಬಾಲಕನ ದೇಹ ಶೇ.40 ರಷ್ಟು ಸುಟ್ಟು ಹೋಗಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.
Advertisement
Advertisement
ಮನೆ ಬಳಿ ಸ್ನೇಹಿತರೊಡನೆ ಲಿಖಿತ್ ಕ್ರಿಕೆಟ್ ಆಡುವಾಗ ಕಟ್ಟಡದ ಮೊದಲ ಮಹಡಿಗೆ ಬಾಲ್ ಹೋಗಿತ್ತು. ಈ ವೇಳೆ ಅದನ್ನು ತರಲು ಹೋಗಿದ್ದ ಲಿಖಿತ್ ತಂತಿ ತುಳಿದು ಕೆಳಗೆ ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ಸ್ಥಳೀಯರು ಹಾಗೂ ಪೋಷಕರು ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
Advertisement
ಮತ್ತಿಕೆರೆಯ ನಿವಾಸಿ ರಮಾದೇವಿ ಹಾಗೂ ಅಂಬರೀಶ್ ದಂಪತಿಗೆ ಲಿಖಿತ್ ಒಬ್ಬನೆ ಪುತ್ರನಾಗಿದ್ದು, 9 ನೇ ತರಗತಿ ಓದುತ್ತಿದ್ದನು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರಸ್ತೆ ಮೇಲೆ ಕೇಬಲ್ ವಯರ್ ಜೊತೆಗೆ, ವಿದ್ಯುತ್ ತಂತಿ ಕೂಡ ನೆಲಕ್ಕೆ ಬಿದ್ದಿತ್ತು. ಇದನ್ನು ಯಾರು ಗಮನಿಸದ ಕಾರಣ ಈ ಅವಘಡ ಸಂಭವಿಸಿದೆ.
Advertisement
ವಿದ್ಯುತ್ ಅವಘಡ ಸಂಭವಿಸಿದ ಜಾಗದಲ್ಲಿ 1 ಗಂಟೆಯಿಂದ ವಿದ್ಯುತ್ ಕಡಿತಗೊಂಡಿದೆ. ಅಲ್ಲದೆ ಘಟನೆಯಿಂದ ಸ್ಥಳದ ಸುತ್ತಮುತ್ತಲ 10 ಕ್ಕೂ ಹೆಚ್ಚು ಮನೆಗಳ ಮೀಟರ್ ಸುಟ್ಟುಹೋಗಿದೆ. ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಲಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನ್ನಲ್ಲಾ ಎಂದು ಸಾರ್ವಜನಿಕರು ಬೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಕೂಡ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಎಲ್‍ಆರ್ ಬಂಡೆಯಲ್ಲಿ ಆಟವಾಡುತ್ತಿದ್ದ ಬಾಲಕ ವಿಕ್ರಂ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದನು. ಈ ಘಟನೆ ಮಾಸುವ ಮುನ್ನವೇ ಏ. 26ರ ಸಂಜೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನ 7ನೇ ಕ್ರಾಸ್‍ನಲ್ಲಿ 9 ವರ್ಷದ ಸಾಯಿ ಚರಣ್ ಇಂತದ್ದೇ ಘಟನೆಯೊಂದರಲ್ಲಿ ಗಂಭೀರ ಗಾಯಗೊಂಡಿದ್ದನು.
ಸಾಯಿ ಚರಣ್ ಸಂಜೆ ಸ್ನೇಹಿತರೊಂದಿಗೆ ಬಾಲ್ ಆಟ ಆಡುತ್ತಿದ್ದನು. ಈ ವೇಳೆ ವಿದ್ಯುತ್ ಕಂಬದ ಹತ್ತಿರ ಹೋದಾಗ ಕಂಬದಿಂದ ಜೋತು ಬಿದ್ದಿದ್ದ ತಂತಿಯಿಂದ ಕರೆಂಟ್ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದನು.