ಖಾಸಗಿ ಶಾಲಾ ಬಾತ್‍ರೂಮಿನಲ್ಲಿ 5ನೇ ತರಗತಿ ವಿದ್ಯಾರ್ಥಿ ಶವ ಪತ್ತೆ

Public TV
2 Min Read
bihar

ಪಾಟ್ನಾ: ಕುತ್ತಿಗೆಗೆ ವಯರ್ ನಿಂದ ಬಿಗಿದ ರೀತಿಯಲ್ಲಿ ಖಾಸಗಿ ಶಾಲೆಯ ಬಾತ್ ರೂಮಿನಲ್ಲಿ 5ನೇ ತರಗತಿಯ ವಿದ್ಯಾರ್ಥಿ ಶವ ಪತ್ತೆಯಾಗಿದೆ.

ಈ ಘಟನೆ ಬಿಹಾರದ ಕೈಮೂರು ಜಿಲ್ಲೆಯಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಕುದ್ರಾದಲ್ಲಿರುವ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಶಾಲೆಯ ಎರಡನೇ ಮಹಡಿಯಲ್ಲಿರುವ ಬಾತ್ ರೂಮಿನಲ್ಲಿ 11 ವರ್ಷದ ಬಾಲಕನ ಶವ ಪತ್ತೆಯಾಗಿದ್ದು, ಕುತ್ತಿಗೆಯಲ್ಲಿ ಹಳದಿ ಬಣ್ಣದ ವಯರ್ ಸುತ್ತಿಕೊಂಡಿತ್ತು. ಬಾತ್ ರೂಮಿಗೆ ಹೊರಗಿನಿಂದ ಲಾಕ್ ಮಾಡಲಾಗಿದ್ದು, ಬಾಗಿಲು ಒಡೆದು ಬಾಲಕನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಆತ ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

ವ್ಯಾಪಾರಿಯೊಬ್ಬರ ಮಗನಾಗಿರುವ ವಿದ್ಯಾರ್ಥಿಯ ಸಹೋದರ ಇತ್ತೀಚೆಗಷ್ಟೇ ಹಾವು ಕಚ್ಚಿ ಮೃತಪಟ್ಟಿದ್ದನು. ಸದ್ಯ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಇದೊಂದು ಹೇಯ ಕೃತ್ಯವಾಗಿದ್ದು, ಕೆಲ ದಿನಗಳಲ್ಲೇ ಪ್ರಕರಣದ ನಿಜಾಂಶ ತಿಳಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಶವವನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರೊಬ್ಬರು ತಿಳಿಸಿದ್ದಾರೆ.

police 1 1

ಬಾಲಕನ ತಾಯಿ ಕೂಡ ಅದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆದರೆ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಹಾಕಿದ್ದರು. ಬಾಲಕನ ಸಹೋದರಿ ಕೂಡ ಅದೇ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಹೀಗಾಗಿ ಸೋಮವಾರ ತರಗತಿ ಮುಗಿದ ಬಳಿಕ ಸಹೋದರಿ ಅಣ್ಣನ ಹುಡುಕಾಟ ನಡೆಸಿದ್ದಾಳೆ. ಈ ವೇಳೆ ಆತ ಎಲ್ಲೂ ಕಾಣಿಸಿರಲಿಲ್ಲ. ಇದರಿಂದ ಗಾಬರಿಗೊಂಡ ಬಾಲಕಿ, ತನ್ನ ಶಿಕ್ಷಕಿಯರಿಗೆ ವಿಚಾರ ತಿಳಿಸಿದ್ದಾಳೆ. ಹೀಗಾಗಿ ಅವರು ಕೂಡ ಬಾಲಕನ ಪತ್ತೆಗೆ ಶಾಲೆಯೆಲ್ಲ ತಡಕಾಡಿದ್ದಾರೆ. ಈ ವೇಳೆ ಮಂಗಳವಾರ ಬಾಲಕನ ಶವ ಬಾತ್ ರೂಮಿನಲ್ಲಿ ಪತ್ತೆಯಾಗಿದೆ.

ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಸ್ಥಳೀಯರು ಶಾಲೆಗೆ ಮತ್ತಿಗೆ ಹಾಕಿದ್ದಾರೆ. ಅಲ್ಲದೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಶಾಲೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆಯೇ ಶಾಲಾ ಪ್ರಾಂಶುಪಾಲ, ನಿರ್ದೇಶಕ ಹಾಗೂ ಐವರು ಟೀಚರ್ಸ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *