ಚಿಕ್ಕಮಗಳೂರು: ಗಂಡಾನೆಯೊಂದು 50 ಅಡಿ ಬಂಡೆ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಬಾಳೆಹೊನ್ನೂರು ಸಮೀಪದ ಹ್ಯಾರಂಬಿ ಗ್ರಾಮದಲ್ಲಿ ನಡೆದಿದೆ.
ಭದ್ರಾ ವನ್ಯಜೀವಿ ಅರಣ್ಯದಿಂದ 2 ಕಾಡಾನೆಗಳು ಹೊರಬಂದಿದ್ದವು. ಅವುಗಳು ಕಳೆದ ವಾರದಿಂದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸುತ್ತಮುತ್ತಲಿನ ಕಾಫಿ ತೋಟವನ್ನು ಹಾಳು ಮಾಡುತ್ತಿದ್ದವು. ಈ ಸಂಬಂಧ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ವನ್ಯಜೀವಿ ವಿಭಾಗದ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬಂಡೆಯ ಮೇಲೆ ಓಡುತ್ತಿದ್ದ ಸುಮಾರು 50 ವರ್ಷದ ಗಂಡಾನೆ ಕಾಲು ಜಾರಿ ಕೆಳಗೆ ಬಿದ್ದಿದೆ. 50 ಅಡಿ ಬಂಡೆಯ ಮೇಲಿಂದ ಬಿದ್ದ ಪರಿಣಾಮ ಗಂಭೀರ ಗಾಯಗಳಿಂದ ನಿತ್ರಾಣಗೊಂಡು ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆನೆಯ ಸಾವಿಗೆ ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ.