ಬೆಂಗಳೂರು: ಮನೆಯಲ್ಲಿ ಸಾಕಿದ್ದ ಪ್ರೀತಿಯ ಶ್ವಾನ (Dog) ಎರಡು ದಿನಗಳಿಂದ ನಾಪತ್ತೆಯಾಗಿದ್ದ ಹಿನ್ನೆಲೆ ನಾಯಿ ಹುಡುಕಲು ಹೋಗಿದ್ದ ಬಾಲಕನಿಗೆ (Boy) ರೈಲು (Train) ಡಿಕ್ಕಿಯಾಗಿ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ಮುದ್ದಲಿಂಗನಹಳ್ಳಿ ಗೇಟ್ ಬಳಿ ಸಂಭವಿಸಿದೆ.
ಯೋಗೇಂದ್ರ (16) ಮೃತ ಬಾಲಕ. ಶ್ರೀನಿವಾಸ್ ಮತ್ತು ಚನ್ನಮ್ಮ ದಂಪತಿ ಮಗ ಯೋಗೆಂದ್ರ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಸಾಕು ನಾಯಿ ಕಾಣೆಯಾಗಿತ್ತು. ನಾಯಿ ಕಾಣೆಯಾದ ಹಿನ್ನೆಲೆ ಮನನೊಂದಿದ್ದ ಯೋಗೇಂದ್ರ ಬೆಳಗ್ಗೆ ತಂದೆ-ತಾಯಿಗೆ ತಿಳಿಸದೆ ಶ್ವಾನವನ್ನು ಹುಡುಕಲು ತೆರಳಿದ್ದ ವೇಳೆ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಗಂಡನ ಮನೆಗೆ ಹೋಗಲ್ಲ ಅಂತ ಹಠ ಹಿಡಿದ ಅಕ್ಕ – ವೇಲ್‌ನಲ್ಲಿ ಕೈಕಟ್ಟಿ ಬಿಟ್ಟು ಬಂದ ತಮ್ಮ!
ಇನ್ನು ಯೋಗೇಂದ್ರ ಲಾಂಗ್ ಜಂಪ್ ಕ್ರೀಡಾ ಪಟುವಾಗಿದ್ದ. ಶಾಲಾ ಹಂತದಲ್ಲಿ ಹಲವಾರು ಪ್ರಶಸ್ತಿ ಗಳಿಸಿದ್ದು, ಉತ್ತಮ ವಿದ್ಯಾಭ್ಯಾಸದ ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಘಟನಾ ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮೃತ ದೇಹ ಹಸ್ತಾಂತರ ಮಾಡಲಾಗಿದೆ. ಶವಗಾರದ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಲಿಸುತ್ತಿದ್ದ KSRTC ಬಸ್‌ಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

