ಭೋಪಾಲ್: ಹಸಿವನ್ನು ನೀಗಿಸಿಕೊಳ್ಳಲು 10 ವರ್ಷದ ಬಾಲಕನೊಬ್ಬ ಮನೆಯಲ್ಲಿಟ್ಟಿದ್ದ ಕ್ರಿಮಿನಾಶಕವನ್ನು ಕುಡಿದ ಘಟನೆ ಮಧ್ಯ ಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ಡಿ. 29ರಂದು ಪೊನ್ಬಟ್ಟ ಗ್ರಾಮದ ಬುಡಕಟ್ಟು ಜನಾಂಗದ ಬಾಲಕನೊಬ್ಬ ಮನೆಯಲ್ಲಿ ಊಟ ಮಾಡಲು ಏನೂ ಇಲ್ಲದಿದ್ದ ಕಾರಣ ತನ್ನ ಹಸಿವನ್ನು ನೀಗಿಸಿಕೊಳ್ಳಲು ಕ್ರಿಮಿನಾಶಕವನ್ನೇ ಆಹಾರವೆಂದು ಕುಡಿದಿದ್ದನು. ಆದರೆ ಕಳೆದ ಸೋಮವಾರದಂದು ಈ ಸುದ್ದಿ ಬೆಳಕಿಗೆ ಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‍ಸಿಪಿಸಿಆರ್) ರತ್ಲಂ ಜಿಲ್ಲೆಯ ಬುಡಕಟ್ಟು ಜನಾಂಗದವರ ಕುರಿತು ಮಾಹಿತಿ ಸಂಗ್ರಹಿಸಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕ ಹಸಿವನ್ನು ತಾಳಲಾರದೆ ಮನೆಯಲ್ಲಿದ್ದ ಕ್ರಿಮಿನಾಶಕವನ್ನೇ ಆಹಾರವೆಂದು ಭಾವಿಸಿ ಸೇವಿಸಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಾಲಕನ ಮನೆಯಲ್ಲಿ ಕಡು ಬಡತನ ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಪೋಷಕರು ಕೂಲಿ ಕೆಲಸದ ಮೇಲೆ ರಾಜಸ್ತಾನದ ಕೋಟಕ್ಕೆ ಹೋಗಿದ್ದರು. ಆದರಿಂದ ಮನೆಯಲ್ಲಿ ರೇಷನ್ ಖಾಲಿಯಾಗಿದ್ದನ್ನು ಗಮನಿಸಿರಲಿಲ್ಲ. ಈ ವೇಳೆ ಬಾಲಕ ತನಗೆ ಅರಿವಿಲ್ಲದೆ ಕ್ರಿಮಿನಾಶಕ ಸೇವಿಸಿದ್ದನು. ಈಗ ಕೊಂಚ ಚೇತರಿಸಿಕೊಂಡಿದ್ದಾನೆ ಎಂದು ಎನ್‍ಸಿಪಿಸಿಆರ್ ತಂಡದವರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv